ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಮೌನ ಮೆರವಣಿಗೆ

Update: 2016-09-19 09:35 GMT

ಮಂಗಳೂರು, ಸೆ.19: ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಪ್ರಮುಖರ ಮೇಲೆ ತೆರೆಯಲಾಗಿರುವ ರೌಡಿಶೀಟ್ ವಾಪಾಸ್ ಪಡೆಯಲು ಒತ್ತಾಯಿಸಿ, ಇನ್ಸ್ ಪೆಕ್ಟರ್ ಚೆಲುವರಾಜು ಅಮಾನತಿಗೆ ಆಗ್ರಹಿಸಿ ಸುರತ್ಕಲ್ ಠಾಣೆಗೆ ಜೋಕಟ್ಟೆ ಗ್ರಾಮಸ್ಥರು ಬೃಹತ್ ಮೌನ ಮೆರವಣಿಗೆ ನಡೆಸಿದರು.

ವೃದ್ದರು , ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಸುರತ್ಕಲ್ ರೈಲ್ವೆ ಬ್ರಿಡ್ಜ್ ಬಳಿಯಿಂದ ಕಪ್ಪು ಪಟ್ಟಿ  ದರಿಸಿ, ಕಪ್ಪು ಬಾವುಟ ಹಿಡಿದು ಸುರತ್ಕಲ್ ಠಾಣೆಯ ಕಡೆಗೆ ಮೆರವಣಿಗೆ ಹೊರಟರು. ಮೆರವಣಿಗೆ ಸುರತ್ಕಲ್ ಜಂಕ್ಷನ್  ತಲುಪಿದಾಗ ಪೊಲೀಸರು ಮೆರವಣಿಗೆ ಮುಂದೆ ಸಾಗದಂತೆ ತಡೆದರು. ಇದರಿಂದ ಆಕ್ರೋಶಿತರಾದ ಪ್ರತಿಭಟನಾಕಾರರು ರಸ್ತೆ ಮಧ್ಯೆ ಧರಣಿ ಕುಳಿತರು. ಚೆಲುವರಾಜು ಮತ್ತು ಶಾಸಕ ಮೊಯ್ದಿನ್ ಬಾವ ವಿರುದ್ದ ಘೋಷಣೆ ಕೂಗಿದರು.

ಈ ಸಂದರ್ಭ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸುರತ್ಕಲ್ ಠಾಣಾಧಿಕಾರಿ ಚೆಲುವರಾಜು ಹೋರಾಟಗಾರರನ್ನು ರೌಡಿಗಳನ್ನಾಗಿ, ರೌಡಿಗಳನ್ನು ಜನನಾಯಕರನ್ನಾಗಿ ಪರಿಗಣಿಸುತ್ತಾರೆ. ಸುರತ್ಕಲ್ ಪರಿಸರದ ಎಲ್ಲಾ ಕಾನೂನು ಬಾಹಿರ ವ್ಯವಹಾರಗಳನ್ನು ಹಣದಾಸೆಗಾಗಿ ಚೆಲುವರಾಜು ಪೋಷಿಸುತ್ತಿದ್ದು ಸುರತ್ಕಲ್ ಠಾಣೆಯಲ್ಲಿ ಜನ ಸಾಮಾನ್ಯರಿಗೆ ನ್ಯಾಯ ಮರೀಚಿಕೆಯಾಗಿದೆ. ಜನ ಸಾಮಾನ್ಯರು ಪೊಲೀಸ್ ಠಾಣೆಗೆ ತೆರಳಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೋಕಟ್ಟೆ ಹೋರಾಟಗಾರರ ಮೇಲಿನ ರೌಡಿಶೀಟ್ ಚೆಲುವರಾಜುವಿನ ಉದ್ದಟತನದ ಪರಮಾವಧಿ. ತಕ್ಷಣ ಚೆಲುವರಾಜು ವಿರುದ್ದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳ ಆಶ್ರಯದಲ್ಲಿ ತೀವ್ರರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪಣಂಬೂರು ಉಪ ವಿಭಾಗದ ಎಸಿಪಿ ರಾಜೇಂದ್ರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.

ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್.ಹುಸೈನ್, ಅಬೂಬಕರ್ ಬಾವ, ಮೊಯ್ದಿನ್ ಶೆರೀಫ್, ವಿಜಯಾನಂದ ರಾವ್, ತಾ ಪಂ ಸದಸ್ಯ ಬಿ ಎಸ್ ಬಶೀರ್, ಗ್ರಾ ಪಂ ಉಪಾಧ್ಯಕ್ಷ ಸಂಶುದ್ದೀನ್, ಜನಪರ ಹೋರಾಟಗಾರ್ತಿ ವಿದ್ಯಾ ದಿನಕರ್, ನಟೇಶ್ ಉಳ್ಳಾಲ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಶೇಖರ್ ಸಾಲ್ಯಾನ್, ಸಲೀಂ ಶ್ಯಾಡೋ,  ಬಶೀರ್ ಕೃಷ್ಣಾಪುರ, ಶ್ರೀನಾಥ್ , ಅಜ್ಮಾಲ್, ಶ್ರೀನಿವಾಸ್ ಹೊಸಬೆಟ್ಟು ಮತ್ತಿತರರು ಹಾಜರಿದ್ದರು. ಬಿ.ಕೆ. ಇಮ್ತಿಯಾಝ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News