ಶಿಕ್ಷಣ ಸಂಸ್ಥೆಗಳಲ್ಲಿ ಕೋಮುವಾದ ಬಿತ್ತಿದರೆ ಕಠಿಣ ಕ್ರಮ: ಸಚಿವ ಬಸವರಾಜ ರಾಯರೆಡ್ಡಿ

Update: 2016-09-19 11:39 GMT

ಮಂಗಳೂರು, ಸೆ.19: ಶಿಕ್ಷಣ ಸಂಸ್ಥೆಗಳಲ್ಲಿ ಕೋಮುವಾದವನ್ನು ಬಿತ್ತಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಸುಳ್ಯ ಸಮೀಪದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ವಿರೋಧಿಸಿ ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬರುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕೋಮುವಾದಿ ಸಂಘಟನೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಕೋಮುವಾದ ಬಿತ್ತುತ್ತಿರುವ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಸಂಘಟನೆಗಳು ವಿ.ವಿ.ಯಲ್ಲಿ ರಾಜಕೀಯ ಮಾಡುವುದಿಲ್ಲ  ಎಂದು ಹೇಳಬೇಕು. ವಿ.ವಿ.ಯನ್ನು ಬಳಸಿ ಸಂಘಸಂಸ್ಥೆಗಳು ರಾಜಕೀಯ ಮಾಡಬಾರದು. ರಾಣಿ ಅಬ್ಬಕ್ಕ ಕಾರ್ಯಕ್ರಮ ಎಂದು ಹೇಳಿ ಬಿಜೆಪಿ ವಿ.ವಿಯಲ್ಲಿ ರಾಜಕೀಯ ಮಾಡಿದೆ. ವಿ.ವಿ.ಯನ್ನು  ದುರ್ಬಳಕೆ ಮಾಡದಂತೆ ನೋಡಿಕೊಳ್ಳುವ ನೈತಿಕ ಹೊಣೆ ಅವರಿಗೆ ಇದೆ. ಯಾವುದೇ ಕಾರಣಕ್ಕೂ ವಿ.ವಿ.ಯಲ್ಲಿ ಕೋಮುವಾದ ನಡೆಯಲು ಬಿಡುವುದಿಲ್ಲ ಎಂದು ಸಚಿವರು ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕ್ಯಾಮರಾ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯನ್ನು ಉಚ್ಚಾಟಿಸಲಾಗಿದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು. ಪತ್ರಕತ್ರರೊಂದಿಗೆ ಮಾತನಾಡಿದ ಅವರು ವಿದ್ಯಾರ್ಥಿಗೆ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ  ಅದನ್ನು  ರದ್ದುಗೊಳಿಸುವಂತೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಕುಲಪತಿಗೆ ಸೂಚಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News