×
Ad

ಬಂಟ್ವಾಳ: ರಸ್ತೆ, ಚರಂಡಿ ದುರಸ್ತಿಗೆ ಆಗ್ರಹಿಸಿ ಎಸ್‌ಡಿಪಿಐನಿಂದ ಧರಣಿ

Update: 2016-09-19 18:10 IST

ಬಂಟ್ವಾಳ, ಸೆ.19: ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 14 ಮತ್ತು 15ರಲ್ಲಿ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಕುಂಠಿತಗೊಂಡಿದ್ದು, ಪ್ರಮುಖ ರಸ್ತೆಗಳು ಹದೆಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಕೊಳಚೆ ನೀರು ಹರಿಯಲು ಕೆಲವೆಡೆ ಚರಂಡಿಗಳೇ ಇಲ್ಲದಿದ್ದು ಕೆಲವೆಡೆ ಚರಂಡಿಗಳು ತೆರೆದಿದ್ದು ಸಾಂಕ್ರಾಮಿಕ ರೋಗಕ್ಕೆ ಜನರು ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ನಾಗರಿಕರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನೇತೃತ್ವದಲ್ಲಿ ಕೈಕಂಬದಿಂದ ಕೊಡುಂಗೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತಡೆದು ಧರಣಿ ನಡೆಸಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ, ಬಂಟ್ವಾಳ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 14, 15ರ ಪ್ರಮುಖ ರಸ್ತೆಗಳಾದ ಕೈಕಂಬದಿಂದ ಕೊಡಂಗೆ ಮತ್ತು ಕೈಕಂಬ ಮೀನು ಮಾರುಕಟ್ಟೆಯಿಂದ ಮದ್ದ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹದೆಗೆಟ್ಟಿದ್ದು ವಾಹನ ಮತ್ತು ಪಾದಾಚಾರಿಗಳ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಬಗ್ಗೆ ಸ್ಥಳೀಯ ಪುರಸಭಾ ಸದಸ್ಯರು ಮತ್ತು ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಹೇಳಿದರು.

ಈ ಎರಡೂ ವಾರ್ಡ್‌ಗಳ ಕೆಲವೆಡೆ ಕೊಳಚೆ ನೀರು ಹರಿಯಲು ಚರಂಡಿಗಳ ವ್ಯವಸ್ಥೆಯೇ ಇಲ್ಲ. ಇನ್ನು ಕೆಲವೆಡೆ ಇರುವ ಚಂರಂಡಿಗಳು ತೆರೆದ ಸ್ಥಿತಿಯಲ್ಲಿದೆ. ಅಲ್ಲದೆ ಈ ಎರಡೂ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದಿರುವುದರಿಂದಾಗಿ ಇಲ್ಲಿನ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ ಎಂದು ಅವರು ಆರೋಪಿಸಿದರು.

ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ ಮಾತನಾಡಿ, ಬಂಟ್ವಾಳ ಪುರಸಭಾ ವ್ಯಾಪ್ತಿಯ ಇತರ ವಾರ್ಡ್‌ಗಳಿಗೆ ಹೋಲಿಸಿದರೆ ವಾರ್ಡ್ ಸಂಖ್ಯೆ 14 ಮತ್ತು 15ನೆ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳು ತೀರಾ ನೆನಗುದಿಗೆ ಬಿದ್ದಿದೆ. ಈ ಎರಡೂ ವಾರ್ಡ್‌ಗಳಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇಲ್ಲಿನ ಶಾಸಕರು ಮತ್ತು ಪುರಸಭೆ ಅಭಿವೃದ್ಧಿ ಕೆಲಸದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ಬಂಟ್ವಾಳ ಪುರಸಭೆಗೆ ಕೋಟ್ಯಾಂತರ ರೂಪಾಯಿ ಅನುದಾನಗಳು ಮಂಜೂರಾದರೂ 14 ಮತ್ತು 15ನೆ ವಾರ್ಡ್‌ನಲ್ಲಿ ಯೋಗ್ಯ ರಸ್ತೆ, ಚರಂಡಿಗಳಿಲ್ಲದೆ ಜನರು ಪರದಾಡುವಂತಾಗಿದೆ. ಈ ಎರಡು ವಾರ್ಡ್‌ಗಳ ಸದಸ್ಯರಲ್ಲಿ ಒಬ್ಬರು ಕಳೆದ ಅವಧಿಯಲ್ಲಿ ಪುರಸಭೆಯ ಉಪಾಧ್ಯಕ್ಷೆಯಾಗಿದ್ದರೆ ಇನ್ನೊಬ್ಬರು ಪ್ರಸ್ತುತ ಅವಧಿಯ ಉಪಾಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಮತ್ತು ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಕ್ಷೇತ್ರದ ಶಾಸಕರು, ಸ್ಥಳೀಯ ಪುರಸಭೆ ಸದಸ್ಯರು ಅದೇ ಪಕ್ಷದವರಾಗಿದ್ದಾರೆ. ಆದರೂ ಈ ವಾರ್ಡ್‌ಗಳ ರಸ್ತೆಗಳು, ಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದೆಟ್ಟಿದ್ದರೆ ಬೇರೆ ವಾರ್ಡ್‌ಗಳ ಗತಿ ಏನು ಎಂದು ಪ್ರಶ್ನಿಸಿದ ಅವರು, ಮುಂದಿನ 15 ದಿವಸಗಳೊಳಗೆ ಈ ಎರಡೂ ವಾರ್ಡ್‌ಗಳ ರಸ್ತೆಗಳು ಮತ್ತು ಚರಂಡಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಭಟ್‌ರಿಗೆ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಿದರು. ಕೈಂಕಬ-ಕೊಡಂಗೆ ಮತ್ತು ಕೈಕಂಬ ಮೀನು ಮಾರುಕಟ್ಟೆ-ಮದ್ದ ಸಂಪರ್ಕ ರಸ್ತೆಗೆ ಕೂಡಲೇ ಕಾಂಕ್ರಿಟೀಕರಣ ಮಾಡಬೇಕು. 14 ಮತ್ತು 15ನೆ ವಾರ್ಡ್‌ನಲ್ಲಿರುವ ಎಲ್ಲ ತೆರೆದ ಚರಂಡಿಗಳನ್ನು ಮುಚ್ಚಬೇಕು. ಚರಂಡಿ ಇಲ್ಲದ ಪ್ರದೇಶಗಳಿಗೆ ಚಂರಂಡಿ ನಿರ್ಮಿಸಬೇಕು. ತ್ಯಾಜ್ಯ ವಿಲೇವಾರಿ ಸಮರ್ಪಕಗೊಳಿಸುವುದು. ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಫಾಗಿಂಗ್ ಹಾಗೂ ಕೀಟನಾಶಕಗಳನ್ನು ನಿರಂತರವಾಗಿ ಸಿಂಪಡಿಸುವುದು. ಹಾಗೂ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಪುರಸಭಾ ಮುಖ್ಯಧಿಕಾರಿ ಮಾತನಾಡಿ ಯಾವುದೇ ಭೇದಭಾವವಿಲ್ಲದೆ ರಸ್ತೆ, ಚರಂಡಿಯ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಎಸ್‌ಡಿಪಿಐ ಪುರಸಭೆ ಸಮಿತಿ ಕಾರ್ಯದರ್ಶಿ ಇಕ್ಬಾಲ್ ನಂದರಬೆಟ್ಟು, ರಿಕ್ಷಾ ಯೂನಿಯನ್ ಕಾರ್ಯದರ್ಶಿ ಹುಸೈನ್, ಅಕ್ಬರ್ ಅಲಿ, ಯೂಸುಫ್ ಶಬಾನ, ಪಕ್ಷದ ಕಾರ್ಯಕರ್ತರು, ಊರಿನ ನಾಗರಿಕರು ಉಪಸ್ಥಿತರಿದ್ದರು. ಮುಸ್ತಫಾ ಪರ್ಲ್ಯ ವಂದಿಸಿದರು. ಖಲಂದರ್ ಮಾಲಿಕ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News