ನಾರಾಯಣಗುರುಗಳ ವಿಚಾರಧಾರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಸರಕಾರಕ್ಕೆ ಮನವಿ

Update: 2016-09-19 13:27 GMT

ಮಂಗಳೂರು, ಸೆ.19: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠಕ್ಕೆ ಸರಕಾರ ಅನುದಾನ ಮಂಜೂರುಗೊಳಿಸಿದ್ದು, ಶೀಘ್ರವಾಗಿ ಅನುಷ್ಠಾನಗೊಳಿಸಬೇಕು. ಅಲ್ಲದೆ ಬ್ರಹ್ಮಶ್ರೀ ನಾರಾಯಣಗುರುಗಳ ವಿಚಾರಧಾರೆಯನ್ನು ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇತರ ಹಿಂದುಳಿದ ವರ್ಗಗಗಳ ವಿಭಾಗದ ಅಧ್ಯಕ್ಷ ಪಿ.ಧರಣೇಂದ್ರ ಕುಮಾರ್ ಸರಕಾರಕ್ಕೆ ಮನವಿ ಮಾಡಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣ ಗುರುಗಳ ವಿಚಾರಗಳು ಇನ್ನಷ್ಟು ವ್ಯಾಪಕವಾಗಬೇಕು. ಆದ್ದರಿಂದ ಪಠ್ಯದಲ್ಲಿ ತರಲು ಸರಕಾರ ಒತ್ತು ನೀಡಬೇಕು. ಅಲ್ಲದೆ ಅಧ್ಯಯನ ಪೀಠಕ್ಕೆ ಅನುಷ್ಠಾನಗೊಳಿಸಿ ಶಕ್ತಿ ತುಂಬಬೇಕು ಎಂದರು.
 ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳಿಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಮಿತಿಯು ಅವರಿಗೆ ಅಭಿನಂದನೆ ಸಲ್ಲಿಸುತ್ತದೆ. ಈ ವರ್ಗಕ್ಕೆ ಮುಖ್ಯಮಂತ್ರಿಗಳು ಶಕ್ತಿ ತುಂಬಿದ್ದಾರೆ. ಈ ವರ್ಷದಿಂದ ವಿಶ್ವಕರ್ಮ ಜಯಂತಿ ಹಾಗೂ ನಾರಾಯಣ ಗುರು ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲು ಆದೇಶ ನೀಡಿರುವುದು ಸಮುದಾಯ ಹೆಮ್ಮೆಪಡಬೇಕಾದ ವಿಷಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಮೋಹನ್ ಮೆಂಡನ್, ಅಶೋಕ್, ಸುಂದರ ಸಿ. ಪೂಜಾರಿ, ಪ್ರಕಾಶ್ ಸಾಲಿಯಾನ್, ರಮಾನಂದ, ಗಣೇಶ್ ಪೂಜಾರಿ, ಪೂರ್ಣಿಮಾ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News