ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ನವನೀತ್ ಎರಡು ದಿನ ಸಿಐಡಿ ಕಸ್ಟಡಿಗೆ
ಉಡುಪಿ, ಸೆ.19: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ನವನೀತ್ ಶೆಟ್ಟಿಯನ್ನು ಎರಡು ದಿನಗಳ ಕಾಲ ಸಿಐಡಿ ಪೊಲೀಸರ ಕಸ್ಟಡಿಗೆ ಮತ್ತು ಉಳಿದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ಶ್ರೀನಿವಾಸ ಭಟ್, ರಾಘವೇಂದ್ರನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಉಡುಪಿ ನ್ಯಾಯಾಲಯ ಆದೇಶ ನೀಡಿದೆ.
ಸೆ.6ರಿಂದ ನ್ಯಾಯಾಂಗ ಬಂಧನದಲ್ಲಿರುವ ಈ ನಾಲ್ವರು ಆರೋಪಿಗಳ ಜೆ.ಸಿ. ಅವಧಿ ಇಂದಿಗೆ ಮುಗಿದ ಹಿನ್ನೆಲೆಯಲ್ಲಿ ಮಂಗಳೂರು ಜೈಲಿನಿಂದ ರಾಜೇಶ್ವರಿ ಶೆಟ್ಟಿ ಹಾಗೂ ನವನೀತ್ ಶೆಟ್ಟಿ ಮತ್ತು ಹಿರಿಯಡ್ಕ ಜೈಲಿನಿಂದ ಶ್ರೀನಿವಾಸ್ ಭಟ್ ಹಾಗೂ ರಾಘವೇಂದ್ರನನ್ನು ಪೊಲೀಸರು ಇಂದು ಬೆಳಗ್ಗೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ರಾಜೇಶ್ ಕರ್ಣಂ ಮುಂದೆ ಹಾಜರುಪಡಿಸಿದರು.
ಈ ವೇಳೆ ಸಿಒಡಿ ತನಿಖಾಧಿಕಾರಿ ಡಿವೈಎಸ್ಪಿ ಚಂದ್ರಶೇಖರ್ ಆರೋಪಿಗಳ ಪೈಕಿ ನವನೀತ್ ಶೆಟ್ಟಿಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಭಾಸ್ಕರ್ ಶೆಟ್ಟಿಯ ಕೊಲೆಗೆ ಬಳಸಲಾದ ರಾಡ್‌ನ್ನು ವಶಪಡಿಸಿಕೊಳ್ಳಲು ಹಾಗೂ ಇತರ ಸಾಕ್ಷವನ್ನು ಸಂಗ್ರಹಿಸಲು ನವನೀತ್‌ನನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಅಭಿಯೋಜಕರು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿ ಪರ ವಕೀಲ ಅರುಣ್ ಬಂಗೇರ ಬೆಳುವಾಯಿ, ಈ ಹಂತದಲ್ಲಿ ಪೊಲೀಸ್ ಕಸ್ಟಡಿಗೆ ನೀಡಲು ಆಗುವುದಿಲ್ಲ. ಸುಪ್ರೀಂ ಕೋರ್ಟ್ ಹಾಗೂ ಇತರ ಹೈಕೋರ್ಟ್ ತೀರ್ಪಿನಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ ಪ್ರಥಮ 15 ದಿನಗಳ ಒಳಗೆ ಮಾತ್ರ ಪೊಲೀಸ್ ಕಸ್ಟಡಿಗೆ ಕೇಳಬೇಕಾಗುತ್ತದೆ. ಅದರ ನಂತರ ಕೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು.
ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರದ ಹಾಗೂ 20 ವರ್ಷದ ಯುವಕನಾಗಿರುವ ನವನೀತ್, ಅಸ್ತಮಾ ರೋಗದಿಂದ ಬಳಲುತ್ತಿದ್ದು, ಇಂತಹ ಸಂದರ್ಭದಲ್ಲಿ ಆತನನ್ನು ಪೊಲೀಸ್ ಕಸ್ಟಡಿಯಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಗುರಿಪಡಿಸುವುದರಿಂದ ಆತನ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಅವರು ವಾದಿಸಿದರು.
ಸಿಐಡಿ ಪೊಲೀಸರು ಸಲ್ಲಿಸಿದ ಅರ್ಜಿಯಲ್ಲಿ ಹತ್ಯೆಗೆ ಬಳಸಲಾದ ಕರ್ಟನ್ ರಾಡ್‌ನ್ನು ನವನೀತ್‌ನಿಂದ ವಶಪಡಿಸಿಕೊಳ್ಳಬೇಕಾಗಿರುವುದಾಗಿ ತಿಳಿಸಲಾಗಿದೆ. ಆದರೆ ಪೊಲೀಸ್ ದಾಖಲೆಯಲ್ಲಿ ಅದನ್ನು ಈಗಾಗಲೇ ವಶಪಡಿಸಿಕೊಂಡಿರುವುದಾಗಿ ಹೇಳಲಾಗಿದೆ. ಹೀಗಾಗಿ ಸಕಾರಣವಿಲ್ಲದೆ ಒಬ್ಬ ವ್ಯಕ್ತಿಯ ಕಾನೂನು ಬದ್ಧವಾದ ಹಕ್ಕನ್ನು ಕಸಿದುಕೊಳ್ಳಲು ಆಗುವುದಿಲ್ಲ ಎಂದು ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಕೆಲವು ವಿಷಯಗಳ ಕುರಿತು ನವನೀತ್‌ನನ್ನು ವಿಚಾರಣೆಗೆ ಒಳಪಡಿಸಬೇಕಾಗಿದ್ದು, ಹಾಗಾಗಿ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಹಿರಿಯ ಸಹಾಯಕ ಅಭಿಯೋಜಕ ಪ್ರವೀಣ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಅರುಣ್ ಬಂಗೇರ, ನವನೀತ್ ನನ್ನು ವಿಚಾರಣೆ ಮಾಡುವುದಾದರೆ ನ್ಯಾಯಾಲಯದ ಅನುಮತಿ ಪಡೆದು ಜೈಲಿನಲ್ಲಿ ವಿಚಾರಣೆಗೆ ಒಳಪಡಿಸಬಹುದು ಎಂದು ಹೇಳಿದರು.
ಈ ಇಬ್ಬರ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ರಾಜೇಶ್ ಕರ್ಣಂ ಆರೋಪಿ ನವನೀತ್ ಶೆಟ್ಟಿಯನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿ ಸೆ.21ರಂದು ಸಂಜೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶ ನೀಡಿದರು. ಈ ಮಧ್ಯೆ ರಾಜೇಶ್ವರಿ ಶೆಟ್ಟಿ, ಶ್ರೀನಿವಾಸ ಭಟ್, ರಾಘವೇಂದ್ರ ಅವರ ನ್ಯಾಯಾಂಗ ಬಂಧನವನ್ನು ಅ.3ರವರೆಗೆ ವಿಸ್ತರಿಸಿ ಅವರು ಆದೇಶ ನೀಡಿದರು. ಈ ಸಂದರ್ಭದಲ್ಲಿ ಸಿಐಡಿ ಪೊಲೀಸ್ ಅಧೀಕ್ಷಕ ಎಡು ಮಾರ್ಟಿನ್ ಹಾಜರಿದ್ದರು.
ಪ್ರಕರಣದ ತನಿಖೆಯನ್ನು ಸಿಐಡಿ ವಹಿಸಿಕೊಂಡ ನಂತರ ನವನೀತ್‌ನನ್ನು ಇದೇ ಮೊದಲ ಬಾರಿಗೆ ಸಿಐಡಿ ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಉಡುಪಿ ಪೊಲೀಸರು ಆತನನ್ನು ಆ.8ರಿಂದ ಆ.16ರವರೆಗೆ ನಿರಂತರವಾಗಿ ಎಂಟು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ಆರೋಪಿಗಳನ್ನು ಬಸ್ಸಿನಲ್ಲಿ ಕರೆದೊಯ್ದುದಕ್ಕೆ ಆಕ್ಷೇಪ
ಮಂಗಳೂರಿನ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ರಾಜೇಶ್ವರಿ ಹಾಗೂ ನವನೀತ್ ಶೆಟ್ಟಿಯನ್ನು ಇಂದು ಪೊಲೀಸರು ಪಡುಬಿದ್ರೆ ವರೆಗೆ ಪೊಲೀಸ್ ವಾಹನದಲ್ಲಿ, ನಂತರ ಖಾಸಗಿ ಬಸ್ಸಿನಲ್ಲಿ ಉಡುಪಿಗೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಪರ ವಕೀಲ ಅರುಣ್ ಬಂಗೇರ ನ್ಯಾಯಾಧೀಶರ ಮುಂದೆ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದೊಂದು ಗಂಭೀರ ಪ್ರಕರಣವಾಗಿದ್ದು, ಆರೋಪಿಗಳನ್ನು ಮಂಗಳೂರಿನಿಂದ ಬಸ್ಸಿನಲ್ಲಿ ಕರೆದುಕೊಂಡು ಬರುವುದು ಸರಿಯಲ್ಲ. ಇದರಿಂದ ಅವರ ಜೀವಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಅಲ್ಲದೆ ಅವರ ಆರೋಗ್ಯ ವಿಚಾರವನ್ನು ಗಮನಿಸಬೇಕಾಗಿದೆ. ನ್ಯಾಯಾಲಯದ ವಿಚಾರಣೆ ಮುಗಿಯು ವವರೆಗೆ ಆರೋಪಿಗಳ ಮಾನವಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಅವರ ರಕ್ಷಣೆ ನ್ಯಾಯಾಲಯದ ಜವಾಬ್ದಾರಿ ಎಂದು ಅರುಣ್ ಬಂಗೇರ ಹೇಳಿದರು.
ಇದಕ್ಕೆ ಮನ್ನಣೆ ನೀಡಿದ ನ್ಯಾಯಾಧೀಶ ರಾಜೇಶ್ ಕರ್ಣಂ, ಪ್ರಕರಣದ ಆರೋಪಿಗಳನ್ನು ಇನ್ನು ಮುಂದೆ ಮಂಗಳೂರಿನಿಂದ ಪೊಲೀಸ್ ವಾಹನದಲ್ಲಿ ಭದ್ರತೆಯೊಂದಿಗೆ ಕರೆದುಕೊಂಡು ಬರಬೇಕೆಂದು ಆದೇಶಿಸಿದರು. ಸೆ.6 ರಂದೂ ಕೂಡ ರಾಜೇಶ್ವರಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲು ಬಸ್ಸಿನಲ್ಲಿಯೇ ಕರೆದುಕೊಂಡು ಬಂದಿದ್ದರು.