ದೇಶದ ಆರ್ಥಿಕತೆಗೆ ಇಂಜಿನಿಯರ್‌ಗಳು ಕೊಡುಗೆ ನೀಡಿ

Update: 2016-09-19 14:15 GMT

ಮಂಗಳೂರು, ಸೆ. 19: ದೇಶದ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದಕ್ಕೆ ಪೂರಕವಾದ ಸ್ವ ಉದ್ಯಮಗಳನ್ನು ದೇಶದಲ್ಲೇ ಹುಟ್ಟುಹಾಕುವ ಪ್ರತಿಭಾ ಪಲಾಯನಕ್ಕೆ ನಿಯಂತ್ರಣ ಹೇರಿ ದೇಶ ಹಾಗೂ ರಾಜ್ಯದ ಆರ್ಥಿಕತೆಗೆ ಕೊಡುಗೆಯನ್ನು ನೀಡಬೇಕು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ನಗರದ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿ ಪರಿಷತ್‌ನ ಉದ್ಘಾಟನೆ ನೆರವೇರಿಸಿ ವಿದ್ಯಾರ್ಥಿ ನಾಯಕರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ದೇಶದಲ್ಲಿ 7,000ಕ್ಕೂ ಅಧಿಕ ಹಾಗೂ ರಾಜ್ಯದಲ್ಲಿ 212 ಇಂಜಿನಿಯರಿಂಗ್ ಕಾಲೇಜುಗಳಿವೆ. ದೇಶದಲ್ಲಿ ಪ್ರತಿ ವರ್ಷ 15 ಲಕ್ಷಕ್ಕೂ ಅಧಿಕ ಇಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಾತ್ರ ಉದ್ಯಮಗಳು ಬೆಳೆದಿಲ್ಲ. ಉದ್ಯಮಶೀಲತೆ ಹೆಚ್ಚಾಗಿಲ್ಲ. ಈ ನಿಟ್ಟಿನಲ್ಲಿ ಸಹ್ಯಾದ್ರಿಯಂತಹ ಕಾಲೇಜಿನಲ್ಲಿ ದೊರಕುವ ಗುಣಮಟ್ಟದ ಶಿಕ್ಷಣದ ಅವಕಾಶವನ್ನು ಉಪಯೋಗಿಸಿಕೊಂಡು ಉದ್ಯಮಗಳನ್ನು ಹುಟ್ಟುಹಾಕಿ ಬೆಳೆಸುವ ನಿಟ್ಟಿನಲ್ಲಿ ಯುವ ಇಂಜಿನಿಯರ್‌ಗಳು, ಎಂಬಿಎ ಪದವೀಧರರು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.

ಉನ್ನತ ಗುಣಮಟ್ಟದ ಇಂಜಿನಿಯರಿಂಗ್ ಹಾಗೂ ಎಂಬಿಎ ಶಿಕ್ಷಣವನ್ನು ನೀಡುತ್ತಿರುವ ಸಹ್ಯಾದ್ರಿ ಕಾಲೇಜಿಗೆ ನೂರಾರು ಪ್ರತಿಷ್ಠಿತ ಉದ್ಯಮ ಕಂಪೆನಿಗಳು ತಾವಾಗಿಯೇ ಬಂದು ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆ ಮೂಲಕ ಕಂಪೆನಿಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇಂಡಿಯಾ ಡಿಡಾಕ್ಟಿಸ್ ಅಸೋಸಿಯೇಶನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆದಿತ್ಯ ಗುಪ್ತಾ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿ ಶಾಸಕ ಬಿ.ಎ. ಮೊಯ್ದಿನ್ ಬಾವ ಮಾತನಾಡಿ, ಶಿಕ್ಷಣವು ಭಾರತವನ್ನಿಂದು ಪ್ರಪಂಚದ ಇತರ ರಾಷ್ಟ್ರಗಳೇ ಹೆಮ್ಮೆ ಪಡುವಂತಹ ಮಟ್ಟಕ್ಕೆ ಬೆಳೆಸಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಂಡಾರಿ ಫೌಂಡೇಶನ್‌ನ ಅಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಸಂಸ್ಥೆಯಲ್ಲಿ ಉನ್ನತ ಶಿಕ್ಷಣದ ಜತೆಗೆ ನಾಯಕತ್ವ ಗುಣವನ್ನು ಬೆಳೆಸುವ ಕಾರ್ಯ ಪ್ರಥಮ ವರ್ಷದಿಂದಲೇ ಆರಂಭವಾಗುತ್ತದೆ ಎಂದರು.

ನಾಲ್ಕು ವರ್ಷಗಳ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಜತೆಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳಿಗೆ ಅರಿತುಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಂಶೋಧನಾತ್ಮಕ ಚಟುವಟಿಕೆಗಳ ಮೂಲಕ ಶಿಕ್ಷಣ ಮುಗಿಸುವ ವೇಳೆಗೆ ಬೇರೆ ಕಡೆ ಉದ್ಯೋಗ ಅರಸಿಕೊಂಡು ಹೋಗುವ ಬದಲು ಉದ್ಯೋಗ ನೀಡುವ ಉದ್ಯೋಗದಾತರಾಗಿ ಹೊರಹೋಗುವ ಶಿಕ್ಷಣವನ್ನು ಸಂಸ್ಥೆಯಲ್ಲಿ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ವಿಲ್ಮಾ ಪವಿತ್ರಾ ಪುತ್ರನ್ (ಆಡಳಿತ), ಪೂಜಾ (ಪ್ಲೇಸ್‌ಮೆಂಟ್), ಅನುಷಾ ಹೆಗ್ಡೆ (ಕ್ರೀಡೆ), ಚಿನ್ಮಯ ಭರಣ್ ಎಂ.ಆರ್. (ಸಾಂಸ್ಕೃತಿಕ), ಲೆನ್ಸನ್ ರಾಯ್ ಸಲ್ಡಾನಾ (ಎಂಟರ್‌ಪ್ರನರ್‌ಶಿಪ್), ಪ್ರಣವ್ ಪದವು (ಪ್ರಾಜೆಕ್ಟ್ಸ್ ಮತ್ತು ಸೆಮಿನಾರ್), ಸಹನಾ ಪಿ.(ಕ್ಲಬ್ಸ್), ಜೀತನ್ ಗ್ರಿನಾಲ್ ರಾಡ್ರಿಗಸ್ (ರಿಸರ್ಚ್), ಪ್ರಜ್ವಲ್ ಎಸ್. ಚಂದ್ರ (ತರಬೇತಿ), ನಾಗರಾಜ ಕೆ.ಎಂ. (ಎಂಬಿಎ ಪ್ರತಿನಿಧಿ) ನಾಯಕರಾಗಿ ಪ್ರಮಾಣವಚನ ಸ್ವೀಕರಿಸಿದರು.

ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಉಮೇಶ್ ಎಂ. ಭೂಷಿ ಸ್ವಾಗತಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಬೈರಪ್ಪ, ಉಪ ಪ್ರಾಂಶುಪಾಲ ಪ್ರೊ. ಎಸ್.ಎಸ್. ಬಾಲಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News