ರಶ್ಯ ಚುನಾವಣೆ: ಪುಟಿನ್ ಪರ ಪಕ್ಷಕ್ಕೆ ಭರ್ಜರಿ ವಿಜಯ

Update: 2016-09-19 14:35 GMT

ಮಾಸ್ಕೊ, ಸೆ. 19: ರವಿವಾರ ನಡೆದ ಸಂಸದೀಯ ಚುನಾವಣೆಯಲ್ಲಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ರಾಜಕೀಯ ಮಿತ್ರರು ಭರ್ಜರಿ ವಿಜಯ ಸಾಧಿಸಿದ್ದಾರೆ. ಬಹುತೇಕ ಸಂಪೂರ್ಣ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಇನ್ನು 18 ತಿಂಗಳಲ್ಲಿ ನಾಲ್ಕನೆ ಬಾರಿ ಅಧ್ಯಕ್ಷರಾಗಲು ಪುಟಿನ್ ಸಜ್ಜಾಗಿದ್ದಾರೆ.

ಪುಟಿನ್ 16 ವರ್ಷಗಳ ಹಿಂದೆ ಮೊದಲ ಬಾರಿ ಅಧ್ಯಕ್ಷರಾದ ಬಳಿಕ ಸ್ಥಾಪಿಸಿದ ಆಡಳಿತಾರೂಢ ಯುನೈಟೆಡ್ ರಶ್ಯ ಪಾರ್ಟಿ ದೇಶದ ಸಂಸತ್ತು ‘ಡ್ಯೂಮ’ದಲ್ಲಿ ಲಭ್ಯವಿರುವ 450 ಸ್ಥಾನಗಳ ಪೈಕಿ 343 ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ ಎಂದು ಕೇಂದ್ರೀಯ ಚುನಾವಣಾ ಆಯೋಗ ತಿಳಿಸಿದೆ.

93 ಶೇಕಡ ಮತಗಳ ಎಣಿಕೆಯಾದ ಬಳಿಕ ಆಯೋಗ ಈ ಘೋಷಣೆಯನ್ನು ಮಾಡಿದೆ.

 ಈ ಹಿಂದೆ 2011ರಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಪಕ್ಷವು 238 ಸ್ಥಾನಗಳನ್ನು ಗೆದ್ದಿತ್ತು. ಈ ಬಹುಮತವು ಸಂವಿಧಾನದಲ್ಲಿ ಮಾರ್ಪಾಡುಗಳನ್ನು ತರಲು ಯುನೈಟೆಡ್ ರಶ್ಯಕ್ಕೆ ಅನುವು ಮಾಡಿಕೊಡಲಿದೆ. ಆದಾಗ್ಯೂ, ಪುಟಿನ್ ಈಗಿನ ಸಂವಿಧಾನದಡಿಯಲ್ಲೇ ನಾಲ್ಕನೆ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಯಾಕೆಂದರೆ, ತನ್ನ ಎರಡು ಮತ್ತು ಮೂರನೆ ಅವಧಿಗಳಲ್ಲಿ ಅವರು ಪ್ರಧಾನಿಯಾಗಿದ್ದರು.

 ಸುಧಾರಣಾವಾದಿ ಪ್ರತಿಪಕ್ಷಗಳು ಯಾವುದೇ ಸ್ಥಾನವನ್ನು ಗೆದ್ದಿಲ್ಲ. ಹಾಲಿ ಸಂಸತ್ತಿನಲ್ಲಿ ಈ ಪಕ್ಷಗಳ ಕೇವಲ ಓರ್ವ ಸಂಸದ ಇದ್ದಾರೆ.

ಆದರೆ, ಈ ಬಾರಿ ಮತದಾನದ ಪ್ರಮಾಣ ಕೇವಲ 48 ಶೇಕಡ ಆಗಿತ್ತು. 2011ರ ಚುನಾವಣೆಯಲ್ಲಿ ಸುಮಾರು 60 ಶೇಕಡ ಮತದಾರರು ಮತ ಚಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News