×
Ad

ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮ ಪಾರ್ಕ್ ಉದ್ಘಾಟನೆ

Update: 2016-09-19 20:11 IST

ಮಂಗಳೂರು, ಸೆ.19: ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾಜಿಕ, ನೈತಿಕ ವೌಲ್ಯಗಳು ಕುಸಿಯದಂತೆ ಎಚ್ಚರ ವಹಿಸಬೇಕಾಗಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರೆಡ್ಡಿ ಕರೆ ನೀಡಿದ್ದಾರೆ.

ಅವರು ಇಂದು ಮಂಗಳೂರು ತಾಲೂಕಿನ ಇನೋಳಿಯಲ್ಲಿರುವ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಎಂಟರ್‌ಪ್ರುನರ್ ಪಾರ್ಕ್ (ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮ ಪಾರ್ಕ್) ಉದ್ಘಾಟಿಸಿ ಮಾತನಾಡಿದರು.

ವಿ.ವಿ.ಗಳಲ್ಲಿ ಅಲ್ಪ ಸಂಖ್ಯಾತರು,ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಕಠಿಣ ಕ್ರಮ

ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಮತೀಯವಾದದ ಮೂಲಕ ನಡೆಯುತ್ತಿರುವ ದೌರ್ಜನ್ಯವನ್ನು ಸರಕಾರ ಸಹಿಸುವುದಿಲ್ಲ. ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ರಾಜ್ಯ ಸರಕಾರ ರಾಜ್ಯದಲ್ಲಿ ಸರ್ವಜನರ ಅಭಿವೃದ್ಧಿಯನ್ನು, ಸಾಮರಸ್ಯವನ್ನು ಬಯಸುತ್ತದೆ. ಪ್ರಸಕ್ತ ಹಣದ ದುರಾಸೆಯ ಪರಿಣಾಮವಾಗಿ ಸುಶಿಕ್ಷಿತರಲ್ಲಿ ನೈತಿಕ ವೌಲ್ಯ ಕುಸಿಯುತ್ತಿದೆ. ವಿದ್ಯಾಸಂಸ್ಥೆಗಳು ಬದ್ಧತೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಬೇಕಾಗಿದೆ. ಬಿಐಟಿ ಯಂತಹ ಸಂಸ್ಥೆಗಳು ಮಾನವೀಯ ನೆಲೆಯ ಕಾಳಜಿಯೊಂದಿಗೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದು ಶತಮಾನಗಳ ಹಿಂದಿನಿಂದ ಆ ಪರಂಪರೆಯಲ್ಲಿ ಬ್ಯಾರೀಸ್ ಸಂಸ್ಥೆ ಬೆಳೆದು ಬಂದಿರುವುದು ಶ್ಲಾಘನೀಯ ಎಂದು ಬಸವರಾಜ ರಾಯ ರೆಡ್ಡಿ ತಿಳಿಸಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಮತೀಯವಾದಿ ವಿದ್ಯಾರ್ಥಿ ಸಂಘಟನೆಗಳನ್ನು ದೂರ ಇಡಬೇಕು. ಕೋಮುವಾದವನ್ನು ಎದುರಿಸಲು ಇನ್ನೊಂದು ಕೋಮುವಾದಿ ಸಂಘಟನೆಯನ್ನು ಹುಟ್ಟು ಹಾಕುವುದು ಸರಿಯಲ್ಲ. ವದಂತಿಗಳು, ಸುಳ್ಳುಗಳ ಮೂಲಕ ಸಮಾಜದಲ್ಲಿ ಕೋಮುಗಲಭೆ ನಡೆಸುವ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಎರಡೂ ವರ್ಗದ ಕೋಮುವಾದಿಗಳಿಂದಲೂ ಅಪಾಯವಿದೆ. ಸಮಾಜದಲ್ಲಿ ಪ್ರಾಮಾಣಿಕತೆಯ ಕೊರತೆ ಇದೆ.ಆದರೂ ವಿರಳ ಸಂಖ್ಯೆಯಲ್ಲಿರುವ ಪ್ರಾಮಾಣಿಕರನ್ನು ಗುರುತಿಸುವ ಗೌರವಿಸುವ ಕೆಲಸ ಆಗಬೇಕಾಗಿದೆ ಎಂದು ಬ್ಯಾರೀಸ್ ಸಂಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಪರಿಸರ ಮತ್ತು ಅರಣ್ಯ ಸಚಿವ ಬಿ.ರಮಾನಾಥ ರೈ ಶುಭ ಹಾರೈಸಿದರು.

ವಿದ್ಯಾರ್ಥಿಗಳು ವಿದ್ಯಾಂವತರಾಗಿ, ಬುದ್ಧಿವಂತರಾಗಿ, ನೈತಿಕವಾಗಿ ಮತ್ತು ಭಾವನಾತ್ಮಕವಾಗಿ ಪ್ರಬುದ್ಧರಾದರೆ ಅವರೇ ದೇಶದ ಸಂಪತ್ತು. ಈ ನಿಟ್ಟಿನಲ್ಲಿ ಬಿಐಟಿಯಲ್ಲಿ ಈ ರೀತಿಯ ಬೆಳವಣಿಗೆಗೆ ಎಲ್ಲಾ ಅವಕಾಶಗಳಿವೆ. ವಿದ್ಯಾರ್ಥಿಗಳು ಅದನ್ನು ಉಪಯೋಗಿಸಿಕೊಂಡು ಬೆಳೆಯಬೇಕು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಶುಭ ಕೋರಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಮಾತನಾಡುತ್ತಾ, ಬ್ಯಾರಿಸ್ ಶಿಕ್ಷಣ ಸಂಸ್ಥೆಗಳು ಕಳೆದ 110 ವರ್ಷಗಳಲ್ಲಿ ಬೆಳೆದು ಬಂದ ಬಗ್ಗೆ ವಿವರಿಸಿದರು. ಪ್ರಸಕ್ತ ಜಗತ್ತಿನ ಶ್ರೇಷ್ಠ ವಿದ್ಯಾಸಂಸ್ಥೆಗಳ ಸಾಲಿನಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆಯಬೇಕಾಗಿದೆ ಎಂದರು.

ಸಮಾರಂಭದಲ್ಲಿ ಬಿಐಟಿಯ ಹಿರಿಯ ಸಲಹೆಗಾರ ಡಾ.ಎಸ್.ಕೆ.ರಾಯ್ಕರ್, ಡಾ.ಅಝೀಝ್ ಮುಸ್ತಾಫ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಹಾಜಿ ಮಾಸ್ಟರ್ ಮೆಹಮೂದ್, ಬೀಡ್ಸ್ ಕಾಲೇಜಿನ ಡೀನ್ ಮುಹಮ್ಮದ್ ನಿಸಾರ್, ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ್ ಭಂಡಾರಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ಸ್ವಾಗತಿಸಿದರು. ಪ್ರೊ.ಮುಸ್ತಾಫ ಬಸ್ತಿಕೋಡಿ ವಂದಿಸಿದರು. ಫಾಹಿಮಾ ಕಾರ್ಯಕ್ರಮ ನಿರೂಪಿಸಿದರು.

 ಇದೇ ಸಂದರ್ಭದಲ್ಲಿ ಕಬ್ಬಿನ ಬೆಳೆಯನ್ನು ಕಟಾವು ಮಾಡುವ ಕಿರು ಯಂತ್ರದ ಮಾದರಿ ಹಾಗೂ ಕಿರಿಯ ಇಲೆಕ್ಟ್ರಿಕ್ ಕಾರು, ನೀರನ್ನು ಇಂಧನವಾಗಿ ಬಳಸಿ ಓಡುವ ಕಾರಿನ ಮಾದರಿ ಹಾಗೂ ಗಾಳಿಯ ಒತ್ತಡದಿಂದ ಚಲಿಸುವ ಕಾರಿನ ಮಾದರಿಗಳನ್ನು ಪ್ರದರ್ಶಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News