ಹೋಟೆಲ್, ರಸ್ತೆ ಬದಿಯ ತಿಂಡಿ ಸ್ಟಾಲ್‌ಗಳ ಸ್ವಚ್ಛತೆ ತಪಾಸಣೆಗೆ ಸೂಚನೆ

Update: 2016-09-19 15:35 GMT

ಮಂಗಳೂರು, ಸೆ. 19: ಜಿಲ್ಲೆಯ ಹೋಟೆಲ್, ತಿಂಡಿ ಸ್ಟಾಲ್, ರಸ್ತೆ ಬದಿ ತಿನಿಸು ಮಾರಾಟ ಸ್ಟಾಲ್‌ಗಳು ಸ್ವಚ್ಛತೆಯನ್ನು ಕಾಪಾಡಿರುವ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣಾ ಕಾರ್ಯ ನಡೆಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸೂಚನೆ ನೀಡಿದ್ದಾರೆ.

ಅವರು ಸೋಮವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಗರಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸ್ವಚ್ಛತೆ ತಪಾಸಣೆ ಅನಿವಾರ್ಯವಾಗಿದೆ. ಹಲವು ಹೋಟೆಲ್‌ಗಳಲ್ಲಿ ಕುಡಿಯುವ ನೀರು ಸೇರಿದಂತೆ ತಿಂಡಿ ತಿನಿಸು ತಯಾರಿಕೆಯಲ್ಲಿ ಸ್ವಚ್ಛತೆ ಕಾಪಾಡದಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಸ್ವಚ್ಛತಾ ತಪಾಸಣೆ ಕಾರ್ಯಾಚರಣೆ ನಡೆಸುವಂತೆ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

 ಜಿಲ್ಲೆಯಲ್ಲಿ ಹೋಟೆಲ್‌ಗಳ, ತಿಂಡಿ ಮಾರಾಟ ಸ್ಟಾಲ್‌ಗಳ ಪರಿಶೀಲನೆಗೆ ಆಹಾರ ಸುರಕ್ಷತಾ ಅಧಿಕಾರಿಗಳಿದ್ದರೂ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ. ಅಧ್ಯಕ್ಷರು, ಇನ್ನು ಮುಂದೆ ಅವರ ಕಾರ್ಯಚಟುವಟಿಕೆಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದರು. ಅಲ್ಲದೇ, ಮುಂದಿನ ಕೆಡಿಪಿ ಸಭೆಯಲ್ಲಿ ಸದ್ರಿ ಅಧಿಕಾರಿಯನ್ನು ಭಾಗವಹಿಸಲು ನಿರ್ದೇಶಿಸಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಆಹಾರ, ತಿಂಡಿ ತಿನಿಸುಗಳ ಪರಿಶೀಲನೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಹಲವು ಹೋಟೆಲ್, ತಿಂಡಿ ಮಾರಾಟ ಕೇಂದ್ರಗಳಲ್ಲಿ ಗಲೀಜು ವಾತಾವರಣ ಕಂಡುಬರುತ್ತಿದೆ. ಹೋಟೆಲ್‌ಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ವರ್ಷಾನುಗಟ್ಟಲೆ ಸ್ವಚ್ಛಗೊಳಿಸದೆ, ಗ್ರಾಹಕರಿಗೆ ನೀಡಲಾಗುತ್ತಿದೆ. ಇದಲ್ಲದೇ, ರಸ್ತೆ ಬದಿಗಳಲ್ಲೇ ಊಟ, ತಿಂಡಿಗಳನ್ನು ತೀರಾ ಅಸ್ವಚ್ಛ ವಾತಾವರಣದಲ್ಲಿ ತಯಾರಿಸಲಾಗುತ್ತಿದೆ. ತಿಂಡಿಗಳಲ್ಲಿ ಕಳಪೆ ಎಣ್ಣೆ, ಅಪಾಯಕಾರಿ ಪೌಡರ್‌ಗಳನ್ನು ಬಳಸಲಾಗುತ್ತಿದೆ. ಇದರ ಮೇಲೆ ಯಾವುದೇ ನಿಗಾ ಇಲ್ಲದಿರುವುದರಿಂದ ನಾಗರಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಇದನ್ನು ನಿಯಂತ್ರಿಸಬೇಕಾಗಿದೆ ಎಂದು ಹೇಳಿದರು.

ಹೊಸ ಗ್ರಾ.ಪಂ.ಗಳಿಗೆ ಕಟ್ಟಡ: ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರಾಮ ಪಂಚಾಯತ್‌ಗಳಿಗೆ ಕಚೇರಿ ಕಟ್ಟಡ ನಿರ್ಮಾಣವನ್ನು ತ್ವರಿತಗತಿಯಲ್ಲಿ ನಡೆಸಬೇಕು. ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಲಭ್ಯವಿದೆ. ಈ ನಿಟ್ಟಿನಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮತ್ತು ತಹಶೀಲ್ದಾರ್‌ಗಳು ಜಂಟಿಯಾಗಿ ಸಮಾಲೋಚಿಸಿ ಸೂಕ್ತ ನಿವೇಶನ ಪಡೆಯುವಂತೆ ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ತಿಳಿಸಿದರು.

ಗಂಗಾಕಲ್ಯಾಣ ಯೋಜನೆಯಲ್ಲಿ ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಿರೀಕ್ಷಿತ ಅರ್ಜಿಗಳೇ ಬಂದಿಲ್ಲ. ಇನ್ನು ಕೆಲವು ಕ್ಷೇತ್ರಗಳಲ್ಲಿ ಸಾಕಷ್ಟು ಅಧಿಕ ಅರ್ಜಿಗಳು ಬಂದಿವೆ. ಈ ನಿಟ್ಟಿನಲ್ಲಿ ಬೇಡಿಕೆ ಇರುವ ಕಡೆಗೆ ನಿಗದಿತ ಗುರಿಗಳನ್ನು ವರ್ಗಾಯಿಸುವ ಸಂಬಂಧ ಶಾಸಕರೊಂದಿಗೆ ಚರ್ಚಿಸುವಂತೆ ಜಿ.ಪಂ. ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

ಮರಳು ಪೂರೈಕೆ: ಜಿಲ್ಲೆಯಲ್ಲಿ ಸರಕಾರಿ ಕಾಮಗಾರಿಗಳಿಗೆ ಮರಳು ಕೊರತೆಯಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಜಿ.ಪಂ. ಇಂಜಿನಿಯರಿಂಗ್ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಪ್ರಸ್ತುತ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ನಡೆಯುತ್ತಿಲ್ಲ. ಆದರೆ ನಾನ್ ಸಿಆರ್‌ಝಡ್ ಪ್ರದೇಶಗಳ 19 ಮರಳು ಬ್ಲಾಕುಗಳು ಲೋಕೋಪಯೋಗಿ ಇಲಾಖೆಯ ನಿರ್ವಹಣೆಯಲ್ಲಿದೆ. ಅಲ್ಲಿಂದ ಮರಳನ್ನು ಪಡೆಯಬಹುದಾಗಿದೆ. ಗಣಿ ಇಲಾಖೆಯ ನಿರ್ವಹಣೆಯಲ್ಲಿರುವ 18 ಮರಳು ಬ್ಲಾಕುಗಳಿಂದ ಮರಳೆತ್ತಲು ಶೀಘ್ರವೇ ಟೆಂಡರ್ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಸರ್ವೋತ್ತಮ ಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News