ಕಾನ್ಪುರದಲ್ಲಿ 500ನೆ ಟೆಸ್ಟ್ ಸಂಭ್ರಮ ಸಮಾರಂಭದಿಂದ ದೂರ ಸರಿದ ಶಶಾಂಕ್

Update: 2016-09-20 06:01 GMT

 ಮುಂಬೈ, ಸೆ.20: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ(ಐಸಿಸಿ) ಚೇರ್ಮನ್ ಶಶಾಂಕ್ ಮನೋಹರ್ ಈ ವಾರ ಕಾನ್ಪುರದಲ್ಲಿ ನಡೆಯಲಿರುವ ಭಾರತ ಕ್ರಿಕೆಟ್ ತಂಡದ 500ನೆ ಟೆಸ್ಟ್ ಸಂಭ್ರಮಾಚರಣೆಯಲ್ಲಿ ಹಾಜರಾಗುವುದಿಲ್ಲ. ಐತಿಹಾಸಿಕ ಸಮಾರಂಭದಲ್ಲಿ ಹಾಜರಾಗುವಂತೆ ಬಿಸಿಸಿಐ ನೀಡಿರುವ ಆಹ್ವಾನವನ್ನು ಶಶಾಂಕ್ ನಯವಾಗಿಯೇ ತಿರಸ್ಕರಿಸಿದ್ದಾರೆ.

ಬಿಡುವಿಲ್ಲದ ಪ್ರಯಾಣ ಹಾಗೂ ವಕೀಲ ವೃತ್ತಿಗೆ ಸಂಬಂಧಿಸಿದ ಬದ್ಧತೆಯ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ಬಿಸಿಸಿಐಗೆ ನಯವಾಗಿ ತಿಳಿಸಿರುವ ಶಶಾಂಕ್, ಐತಿಹಾಸಿಕ ಸಮಾರಂಭಕ್ಕೆ ಶುಭ ಹಾರೈಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಬಿಸಿಸಿಐನ ಅಧ್ಯಕ್ಷ ಅನುರಾಗ್ ಠಾಕೂರ್ ಸಹಿತ ಹಲವು ಉನ್ನತ ಅಧಿಕಾರಿಗಳು ಶಶಾಂಕ್ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿರುವ ಹಿನ್ನೆಲೆಯಲ್ಲಿ ಶಶಾಂಕ್ ಕಾರ್ಯಕ್ರಮದಿಂದ ದೂರ ಉಳಿಯುತ್ತಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಸಿಇಒ ರಿಚರ್ಡ್‌ಸನ್ ಐಸಿಸಿಯನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ ಸಿಂಗಾಪುರದಿಂದ ನಾಗ್ಪುರಕ್ಕೆ ವಾಪಸಾಗಿರುವ ಶಶಾಂಕ್ ಅ.9 ರಿಂದ 13ರ ತನಕ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಬಗ್ಗೆ ಪೂರ್ವ ತಯಾರಿ ನಡೆಸಲಿದ್ದಾರೆ. ಸೆ.26 ರಂದು ಅಮೆರಿಕಕ್ಕೆ ತೆರಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News