ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಕೋಲ್ಕತಾ, ಸೆ.20: ಕೋಲ್ಕತಾದ ನೇತಾಜಿ ಸುಭಾಶ್ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆೆ ಮಹಿಳೆಯೊಬ್ಬರು ಗುವಾಹಟಿಗೆ ತೆರಳುತ್ತಿರುವ ವಿಮಾನದಲ್ಲಿ ಬಾಂಬು ಇದೆ ಎಂದು ಕರೆ ಮಾಡಿರುವ ಹಿನ್ನೆಲೆಯಲ್ಲಿ ತೀವ್ರ ತಪಾಸಣೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಬೆಳಗ್ಗೆ 8:20ಕ್ಕೆ ವಿಮಾನ ನಿಲ್ದಾಣದ ಕಚೇರಿಗೆ ಕರೆ ಮಾಡಿರುವ ಮಹಿಳೆಯೊಬ್ಬರು ಕೋಲ್ಕತಾದಿಂದ ಗುವಾಹಟಿಗೆ 9:30ಕ್ಕೆ ನಿರ್ಗಮಿಸಲಿರುವ ಏರ್ ಇಂಡಿಯಾ 729 ವಿಮಾನದಲ್ಲಿ ಬಾಂಬು ಇಡಲಾಗಿದೆ ಎಂದು ಎಚ್ಚರಿಕೆ ನೀಡಿದ್ದರು. ತಕ್ಷಣವೇ ಬಾಂಬು ಪತ್ತೆ ದಳವನ್ನು ಕರೆಸಲಾಯಿತು.
ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದ 114 ಪ್ರಯಾಣಿಕರಿಗೆ ವಿಮಾನ ಏರದಂತೆ ತಡೆ ಹಿಡಿಯಲಾಯಿತು. ಗುವಾಹಟಿಗೆ ಹೊರಡಲು ಸಜ್ಜಾಗಿದ್ದ ಏರ್‌ಇಂಡಿಯಾ ವಿಮಾನವನ್ನು ಕೂಲಂಕುಷವಾಗಿ ತಪಾಸಣೆ ನಡೆಸಲಾಗುತ್ತಿದ್ದು, ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾದ ಬಗ್ಗೆ ವರದಿಯಾಗಿಲ್ಲ.
ಬಾಂಬು ಬೆದರಿಕೆ ಹಿನ್ನೆಲೆಯಲ್ಲಿ ಕೋಲ್ಕತಾದ ಏರ್‌ಪೋರ್ಟ್‌ನ ಒಳಗೆ ಹಾಗೂ ಹೊರಗೆ ಕಟ್ಟೆಚ್ಚರ ವಹಿಸಲಾಗಿದೆ.