ಆಸ್ತಿ ವಿವಾದ: ಸಹೋದರನನ್ನು ಕೊಂದು ಸೆಪ್ಟಿಕ್ ಟ್ಯಾಂಕ್‌ಗೆ ಹಾಕಿದ!

Update: 2016-09-20 07:03 GMT

ಪಾಲಕ್ಕಾಡ್, ಸೆಪ್ಟಂಬರ್ 20: ಹಿರಿಯ ಸಹೋದರ ಮದುವೆಗೆ ಹಣ ನೀಡಲಿಲ್ಲ ಎಂಬ ಕೋಪದಿಂದ ಸಹೋದರರು ಸೇರಿ ಕೊಂದು ಸೆಪ್ಟಿಕ್ ಟ್ಯಾಂಕ್‌ಗೆ ಹಾಕಿದ ಘಟನೆ ಪಾಲಕ್ಕಾಡ್ ಸಮೀಪ ನಡೆದಿದೆ ಎಂದು ವರದಿಯಾಗಿದೆ.

ಕೊಲೆಯಾದ ವ್ಯಕ್ತಿಯನ್ನು ಪಾಲಕಾಡ್ ಪುದುಪ್ಪರಿಯಾರಂ ಪಾರಕ್ಕಲ್ ಮನೆಯ ವಾಸು ಎಂಬವರ ಪುತ್ರ ಮಣಿಕಂಠ(52)ಎಂದು ಗುರುತಿಸಲಾಗಿದ್ದು, ಇವರ ಕಿರಿ ಸಹೋದರರಾದ ರಾಮಚಂದ್ರನ್(45),ರಾಜೇಶ್(36) ಎಂಬಿಬ್ಬರನ್ನು ಹೇಮಾಂಬಿಕ ಪೊಲೀಸರು ಬಂಧಿಸಿದ್ದಾರೆ.

ರಾಮಚಂದ್ರನ್ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿಫೋರ್ಸ್(ಸಿಐಎಸ್‌ಎಫ್) ಉದ್ಯೋಗಿಯಾಗಿದ್ದಾನೆ. ಕೊಲೆಯಾದ ಮಣಿಕಂಠನ್‌ರ ಇನ್ನೊಬ್ಬ ಸಹೋದರ ಕೃಷ್ಣನ್ ಕುಟ್ಟಿಯ ಮದುವೆ ಸೆಪ್ಟಂಬರ್ ಹನ್ನೆರಡಕ್ಕೆ ನಡೆದಿತ್ತು. ವಿವಾಹದ ಖರ್ಚಿಗೆ ಮಣಿಕಂಠನ್ ಹಣ ನೀಡಲು ನಿರಾಕರಿಸಿದ್ದಕ್ಕಾಗಿ ಕುಟುಂಬದಲ್ಲಿ ಜಗಳವಾಗಿತ್ತು. ಕುಟುಂಬದ ಆಸ್ತಿಯ ಪಾಲು ತನಗೆ ನೀಡಿಲ್ಲ ಎಂದು ಮಣಿಕಂಠನ್ ಕೋರ್ಟಿಗೆ ದೂರು ಸಲ್ಲಿಸಿದ್ದರು. ಲಾಟರಿ ಟಿಕೆಟ್ ಮತ್ತು ಇತರ ಮೂಲಗಳಿಂದ ದುಡಿದ ಹಣ ಬ್ಯಾಂಕ್‌ನಲ್ಲಿ ಮಣಿಕಂಠನ್ ಇರಿಸಿದ್ದರೂ ಮದುವೆ ಖರ್ಚಿನ ಪಾಲನ್ನು ನೀಡಲು ಅವರು ನಿರಾಕರಿಸಿದ್ದರು. ಆರೋಪಿಗಳು ಬಲಪ್ರಯೋಗಿಸಿ ಬ್ಯಾಂಕ್ ಠೇವಣಿಯನ್ನು ವಾಪಸು ಪಡೆಯುವ ಅರ್ಜಿಗೆ ಸಹಿಹಾಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಗತ್ಯವಿರುವ ದಾಖಲೆಗಳನ್ನು ಮಣಿಕಂಠನ್ ನೀಡಿರಲಿಲ್ಲ. ಕೋಪತಪ್ತರಾದ ಸಹೋದರರು ಮಣಿಕಂಠನ್‌ರನ್ನು ಉಸಿರು ಕಟ್ಟಿಸಿ ಕೊಲೆಗೈದಿದ್ದಾರೆ. ಸೆಪ್ಟಂಬರ್ ಐದರಂದು ಕೊಲೆನಡೆಸಿದ್ದೇವೆಂದು ಆರೋಪಿಗಳು ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾರೆಂದು. ನಂತರ ತಪಾಸಣೆ ನಡೆಸಿದಾಗ ಮಣಿಕಂಠನ್‌ರ ಮೃತದೇಹ ಸೆಫ್ಟಿಕ್ ಟ್ಯಾಂಕ್‌ನಲ್ಲಿ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News