ಟ್ರಕ್ಕಿಂಗ್‌ಗೆ ಹೋದಾತ ನಿಧನ
ಅರಿಕ್ಕೋಡ್, ಸೆಪ್ಟಂಬರ್ 20: ಹಿಮಾಚಲಪ್ರದೇಶದಲ್ಲಿ ಟ್ರಕ್ಕಿಂಗ್ ನಡೆಸುತ್ತಿದ್ದ ವೇಳೆ ಅರಿಕ್ಕೋಡ್ ನಿವಾಸಿ ಯುವಕ ಹೃದಯಾಘಾತದಿಂದ ಮೃತರಾಗಿದ್ದಾರೆಂದು ವರದಿಯಾಗಿದೆ . ಉಗ್ರಪುರಂನ ಪಾಲಿಲ್ ಹೌಸ್‌ನ ಪಿಪಿ ನಸೀಂ(34) ನಿಧನರಾದ ವ್ಯಕ್ತಿಯೆಂದು ಗುರುತಿಸಲಾಗಿದ್ದು, ಯೂತ್ ಹಾಸ್ಟೆಲ್ ಅಸೋಸಿಯೇಶನ್ ಏರ್ಪಡಿಸಿದ್ದ ಪ್ರವಾಸ ಕಾರ್ಯಕ್ರಮದ ಅಂಗವಾಗಿ ಸೆಪ್ಟಂಬರ್ ಹದಿಮೂರಂದು ತೆರಳಿದ್ದ ತಂಡದೊಂದಿಗೆ ಅರಿಕ್ಕೋಡ್‌ನಿಂದ ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಅವರ ಜೊತೆಯಲ್ಲಿ ಅವರ ಸಂಬಂಧಿಕರಾದ ಕೆ.ಸಿ. ಶಹೀಂ ಕೂಡಾ ಇದ್ದರೆಂದು ವರದಿಯಾಗಿದೆ.
ಸೋಮವಾರ ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಸಂಬಂಧಿಕರಿಗೆ ಸುದ್ದಿ ತಲುಪಿದ್ದು, ಟ್ರಕ್ಕಿಂಗ್ ನಡೆಸುವ ವೇಳೆ ಉಸಿರಾಟ ತೊಂದರೆ ಕಾಣಿಸಿಕೊಂಡು ಹಿಂದಿರುಗುತ್ತಿದ್ದಾಗ ಹೃದಯಾಘಾತವಾಗಿ ನಿಧನರಾದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಮನಾಲಿ ನಗರದ ಸಿವಿಲ್ ಹಾಸ್ಪಿಟಲ್‌ಗೆ ಕೊಂಡುಹೋದ ಬಳಿಕ ನಸೀಂ ಮೃತರಾಗಿದ್ದಾರೆಂದು ವೈದ್ಯರು ದೃಢೀಕರಿಸಿದ್ದಾರೆ.
ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಸಂಬಂಧಿಕರು ಮನಾಲಿಗೆ ಹೊರಟಿದ್ದಾರೆ. ನಸೀಂ ಯುಡಿ ಕ್ಲಾರ್ಕ್ ಆಗಿ ಉದ್ಯೋಗದಲ್ಲಿದ್ದು ಮಲಪ್ಪುರಂ ಆರ್‌ಟಿಒ ಕಚೇರಿಯಿಂದ ಒಂದು ತಿಂಗಳ ಹಿಂದೆ ನಿಲಂಬೂರು ಕಚೇರಿಗೆ ವರ್ಗಾವಣೆಯಾಗಿದ್ದರು. ನಸೀಂ ವಿವಾಹಿತರಲ್ಲ ಎಂದು ವರದಿ ತಿಳಿಸಿದೆ.