ರಾಜಕೀಯದಲ್ಲಿ ಹೆಚ್ಚದ ಮಹಿಳೆಯರ ಸ್ಥಾನಮಾನ: ಡಾ.ರುತ್ ಕಳವಳ
ಮಂಗಳೂರು, ಸೆ.20: ಸಮಾಜದಲ್ಲಿ ಶಾಂತಿ, ನ್ಯಾಯ ಹಾಗೂ ಮಾನವೀಯ ವೌಲ್ಯಗಳಿಗಾಗಿ ವಿದ್ಯಾರ್ಥಿಗಳು ಮತ್ತು ಮಹಿಳಾ ಚಳವಳಿಗಳು ಐಕ್ಯತೆಯನ್ನು ಬಲಗೊಳಿಸುವಲ್ಲಿ ಪರಿಣಾಮಕಾರಿಯಾಗುತ್ತಿವೆಯಾದರೂ, ರಾಜ್ಯ ಹಾಗೂ ದೇಶದ ರಾಜಕೀಯದಲ್ಲಿ ಮಹಿಳೆಯರ ಸ್ಥಾನಮಾನದಲ್ಲಿ ಪರಿಣಾಮಕಾರಿ ಬದಲಾವಣೆಯಾಗಿಲ್ಲ ಎಂದು ನ್ಯಾಷನಲ್ ಅಲಯನ್ಸ್ ಫಾರ್ ವಿಮೆನ್ ಸಂಸ್ಥೆಯ ಅಧ್ಯಕ್ಷೆ ಡಾ.ರುತ್ ಮನೋರಮಾ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಸೈಂಟ್ ಅಲೋಷಿಯಸ್ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗವು ಬದಲಾಗುತ್ತಿರುವ ಭಾರತದಲ್ಲಿ ಮಹಿಳೆ ಕುರಿತು ಸಂಪ್ರತಿ- 2016 ಹೆಸರಿನಡಿ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ಇಂದು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮಹಿಳೆ ಬಲ ಪಡೆಯುತ್ತಿದ್ದಾಳೆ. ಆದರೆ, ಸಾರ್ವಜನಿಕ ಹಾಗೂ ರಾಜಕೀಯ ಭಾಗವಹಿಸುವಿಕೆಯಲ್ಲಿ ಆಕೆಯ ಮೇಲಿನ ನಿರ್ಬಂಧವು ಆಕೆಯನ್ನು ಮತ್ತಷ್ಟು ತಾರತಮ್ಯಕ್ಕೆ ಒಳಪಡಿಸುತ್ತಿದೆ. ಇದು ಗಂಭೀರ ವಿಷಯ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಗೆ ಶೇ. 50ರ ಸ್ಥಾನಮಾನ ಬಿಡಿ, ಕನಿಷ್ಠ ಶೇ.33ರ ಮೀಸಲಾತಿಯ ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಇಂದಿಗೂ ಮಂಜೂರಾಗದಿರುವುದು ಇದಕ್ಕೊಂದು ಸ್ಪಷ್ಟ ನಿದರ್ಶನ ಎಂದವರು ಬೇಸರಿಸಿದರು.
ಮಹಿಳೆಯರು ಮತ್ತು ಪುರುಷರ ನಡುವೆ ತಾರತಮ್ಯ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ, ಈ ತಾರತಮ್ಯ ಮುಂದುವರಿದಿದೆ. ದಲಿತರು ಮತ್ತು ಕೆಳಸ್ತರದ ಸಮುದಾಯಗಳ ಮಹಿಳೆಯರ ಬದುಕು ಈಗಲೂ ಅಸಹನೀಯ ಮಟ್ಟದಲ್ಲೇ ಉಳಿದಿದೆ. ಪುರುಷರು ಮತ್ತ ಮಹಿಳೆಯರ ವೇತನದಲ್ಲಿ ಭಾರೀ ಅಂತರವಿದೆ. ಪುರುಷ ಪಡೆಯವ ವೇತನದ ಶೇ. 50ರಿಂದ 75ರಷ್ಟು ಪ್ರಮಾಣದಲ್ಲಿ ಮಾತ್ರವೇ ಮಹಿಳೆಗೆ ವೇತನ ಸಿಗುತ್ತಿದೆ. ಈಗಲೂ ದೇಶದಲ್ಲಿ ಜಮೀನಿನ ಒಡೆತನ ಹೊಂದಿರುವ ಮಹಿಳೆಯರ ಪ್ರಮಾಣ ಶೇ.9ರಷ್ಟು ಮಾತ್ರ ಎಂದವರು ವಿವರಿಸಿದರು.
ದೇಶದಲ್ಲಿ ಐದು ಸಾವಿರ ವರ್ಷಗಳಿಂದ ಹೆಣ್ಣಿನ ಮೇಲೆ ನಿರಂತರವಾಗಿ ನಡೆದಿರುವ ದೌರ್ಜನ್ಯವನ್ನು ಎದುರಿಸುವಲ್ಲಿ ಕಳೆದ ಐದು ದಶಕಗಳಿಂದೀಚೆಗೆ ನಡೆದ ಮಹಿಳಾ ಚಳವಳಿಗಳು ಸಫಲವಾಗಿವೆ. ಆದರೆ ವಿಶ್ವವಿದ್ಯಾನಿಲಯದಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಗಲೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು, ಚುಡಾವಣೆಗಳು ಮುಂದುವರಿದಿರುವುದು ಮಾತ್ರ ದುರಂತ ಎಂದವರು ಉಲ್ಲೇಖಿಸಿದರು.
ಯುವ ಶಕ್ತಿಯಿಂದ ಕೂಡಿದ ಮಹಿಳಾ ಚಳವಳಿಗಳು ಮಹಿಳೆಯರ ಮೇಲಿನ ದೌರ್ಜನ್ಯ, ಕುಟುಂಬದಲ್ಲಿ ಪುರುಷ ಪ್ರಾಬಲ್ಯವನ್ನು ಪ್ರಶ್ನಿಸುವಂತಾಗಿದೆ ಎಂದವರು ಹೇಳಿದರು.
ಪುರುಷರಿಂದ ಪ್ರತಿದಿನ ಮಹಿಳಾ ದಿನಾಚರಣೆಯಾಗಬೇಕಿದೆ!
ಸಮಾಜದಲ್ಲಿ ಮಹಿಳೆಯರು ಅಭಿವೃದ್ಧಿಯ ಪಥದಲ್ಲಿ ಸಾಕಷ್ಟು ದಾಪುಗಾಲಿರಿಸಿದ್ದಾರೆಂಬುದು ನಿಜವಾಗಿದ್ದರೂ, ಆ ದಾರಿ ಇನ್ನಷ್ಟು ದೀರ್ಘವಾಗಿದೆ ಎಂಬುದು ಕಟುವಾಸ್ತವ. ಕೇವಲ ವಿಚಾರ ಸಂಕಿರಣಗಳನ್ನು ನಡೆಸುವುದಲ್ಲದೆ, ತಳಮಟ್ಟದಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ಅರಿತು ಪರಿಹಾರ ಕಂಡುಕೊಳ್ಳುವ ಮಾರ್ಗವನ್ನು ಸ್ನಾತಕೋತ್ತರ ಪದವೀಧರರು ಮಾಡುವ ಮೂಲಕ ಅತ್ಯುತ್ತಮ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಅಧ್ಯಕ್ಷತೆ ವಹಿಸಿದ್ದ ಸೈಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಡಯೋನಿಷಿಯಸ್ ವಾಜ್ ಹೇಳಿದರು.
ನಮ್ಮಲ್ಲಿ ದೇವದಾಸಿ ಪದ್ಧತಿಯನ್ನು ನಿಷೇಧಿಸಲಾಗಿದ್ದರೂ, ಆ ದೇವದಾಸಿಯರ ಸ್ಥಿತಿ, ಅವರಿಗೆ ಯಾವ ರೀತಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಎಂಬ ಬಗ್ಗೆ, ಸ್ಲಂ ಮಹಿಳೆಯರ ಸ್ಥಿತಿಗತಿಗಳನ್ನು ನಾವು ತಳಮಟ್ಟದಿಂದ ಅರಿತುಕೊಳ್ಳುವುದು ಇಂದಿನ ಅಗತ್ಯವಾಗಿದೆ. ವಿಚಾರ ಸಂಕಿರಣಗಳಲ್ಲಿ ಇಂತಹ ಸಮಸ್ಯೆಗಳ ಬಗ್ಗೆ ಯಾವ ರೀತಿಯಲ್ಲಿ ಬೆಳಕು ಚೆಲ್ಲಲಾಗುತ್ತದೆ ಎಂಬದು ಅತೀ ಪ್ರಾಮುಖ್ಯವಾಗಿದ್ದು, ಪ್ರತಿ ದಿನ ಮನೆಗಳಲ್ಲಿ ಪುರುಷರಿಂದ ಮಹಿಳಾ ದಿನಾಚರಣೆ ಆಚರಿಸಲ್ಪಡುವ ಪರಿಸ್ಥಿತಿ ನಿರ್ಮಾಣವಾದಾಗ ಸಂಪೂರ್ಣ ಸಮಾನತೆಯನ್ನು ಕಾಣಲು ಸಾಧ್ಯ ಎಂದವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸ್ವೀಬರ್ಟ್ ಡಿಸಿಲ್ವ ಮಾತನಾಡಿ, 130ಕ್ಕೂ ವರ್ಷ ಹಳೆಯದಾದ ಸೈಂಟ್ ಅಲೋಶಿಯಸ್ ಸಂಸ್ಥೆಯಲ್ಲಿ ಕಳೆದ 27 ವರ್ಷಗಳಿಂದ ಮಹಿಳೆಯರಿಗೂ ಶಿಕ್ಷಣ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿಯೂ ಇಂದು ಮಹಿಳೆ ಮುನ್ನಡೆಯುತ್ತಿದ್ದಾಳೆ. ಇದು ಉತ್ತಮ ಬೆಳವಣಿಗೆ ಎಂದರು.
ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಲವೀನಾ ಲೋಬೊ, ವಿಚಾರ ಸಂಕಿರಣದ ಸಂಚಾಲಕಿ ಶ್ವೇತಾ ರಸ್ಕಿನಾ ಮತ್ತು ವಿದ್ಯಾರ್ಥಿ ಸಂಚಾಲಕ ಸಿ.ಎನ್.ಶಾರೋನ್ ಉಪಸ್ಥಿತರಿದ್ದರು.