ಕಾಸರಗೋಡು: ನೀರುಪಾಲಾಗಿದ್ದ ಯುವಕನ ಮೃತದೇಹ ಪತ್ತೆ
ಕಾಸರಗೋಡು, ಸೆ.20: ಕಾಸರಗೋಡು ನೆಲ್ಲಿಕುಂಜೆ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಮಂಗಳವಾರ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ನೆಲ್ಲಿಕುಂಜೆಯ ನಿಮಿಷ್ (20) ಮೃತಪಟ್ಟ ಯುವಕ. ಚೌಕಿ ಸಿಪಿಸಿಆರ್‌ಐ ಸಮೀಪದ ಕಡಲ ಕಿನಾರೆಯಲ್ಲಿ ಮಧ್ಯಾಹ್ನದ ವೇಳೆಗೆ ಮೃತದೇಹ ಪತ್ತೆಯಾಗಿದೆ.
ಸೆ. 17ರಂದು ಇಬ್ಬರು ಸ್ನೇಹಿತರ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ನಿಮಿಷ್ ಸಮುದ್ರಪಾಲಾಗಿದ್ದ. ಕಳೆದ ಮೂರು ದಿನಗಳಿಂದ ಕರಾವಳಿ ಪಡೆ,ಅಗ್ನಿಶಾಮಕ ದಳದ ಸಹಿತ ಸ್ಥಳೀಯರು ಶೋಧ ನಡೆಸುತ್ತಿದ್ದರು. ಮಂಗಳವಾರ ಬೆಳಗ್ಗೆ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು. ಈ ನಡುವೆ ಮಧ್ಯಾಹ್ನದ ವೇಳೆಗೆ ಘಟನೆ ನಡೆದ ಕೆಲವೇ ಮೀಟರ್ ದೂರದ ಸಿಪಿಎಸಿಆರ್‌ಐ ಸಮೀಪದ ಕಡಲ ಕಿನಾರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಇತರ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆಯ ಅವಲೋಕನ ನಡೆಸಿದ್ದರು.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು. ನಿಮಿಷ್ ತಾಳಿಪಡ್ಪು ವಿನ ಹೀರೊಹೋಂಡಾ ಶೋರೂಂನ ನೌಕರನಾಗಿದ್ದ ಎಂದು ತಿಳಿದುಬಂದಿದೆ.