×
Ad

ವರನ ಮಿತ್ರರ ಗಮ್ಮತ್ತಿಗೆ ಬಲಿಯಾದ ವೃದ್ಧ !

Update: 2016-09-20 16:02 IST

ಕಾಸರಗೋಡು, ಸೆಪ್ಟಂಬರ್ 20: ಮದುವೆ ಸಮಾರಂಭಕ್ಕೆ ವರನ ಗೆಳೆಯರಾಗಿರುವವರು ನಡೆಸುವ ಅಕ್ರಮ ಅಭಾಸಗಳಿಂದಾಗಿ ವ್ಯಕ್ತಿಯೊಬ್ಬರ ಸಾವಿನಲ್ಲಿ ಸಮಾಪ್ತಿಕಂಡ ಘಟನೆ ಕಾಸರಗೋಡಿನಿಂದ ವರದಿಯಾಗಿದೆ. ಕಳೆದ ದಿವಸ ಕಾಸರಗೋಡು ನಗರ ಸಮೋಪದ ವರನ ಗೆಳೆಯರೆಂದು ಹೇಳುವ ಯುವಕರು ವಧುವಿನ ಕೋಣೆಗೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದು ತಡೆದ ಹಿರಿಯ ವ್ಯಕ್ತಿಗಳಲೊಬ್ಬರು ಕುಸಿದು ಬಿದ್ದು ಮೃತರಾಗಿದ್ದಾರೆ.

ವರನ ಜೊತೆಗೆ ಕೆಲವರು ವಧುವಿನ ಕೋಣೆಗೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದಾರೆ. ಆಗ ವಧುಮನೆಯ ಹಿರಿಯರು ತಡೆದಿದ್ದಾರೆ. ಇದರ ನಡುವೆ ಬಲಪ್ರಯೋಗವೂ ನಡೆದಿದೆ. ಆಗ ಹಿರಿಯ ವ್ಯಕ್ತಿ ಕುಸಿದು ಬಿದ್ದು ಅಸುನೀಗಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಅವರು ಮೃತಪ್ಟಿದ್ದರು. ಈ ಕುರಿತು ಯಾರೂ ದೂರು ನೀಡಲು ಮುಂದೆ ಬಂದಿಲ್ಲವಾದ್ದರಿಂದ ಘಟನೆ ಅಲ್ಲಿಗೆ ಮುಗಿದಿದೆ ಎಂದು ವೆಬ್‌ಪೋರ್ಟಲೊಂದು ವರದಿ ಮಾಡಿದೆ. ವಿವಾಹದಂದು ರಾತ್ರಿ ವಧುವಿನ ಮನೆಗೆ ಬಂದ ವರನನ್ನು ಕಾರಿಗೆ ಹತ್ತಿಸಿ ಬಹಳ ಹೊತ್ತು ನಗರದಾದ್ಯಂತ ಸುತ್ತಾಡಿಸಿದ ತಂಡವನ್ನು ಇತ್ತೀಚೆಗಷ್ಟೆ ಕಾಸರಗೋಡು ಪೊಲೀಸರು ಬಂಧಿಸಿದ್ದರು. ಉಪ್ಪಳದ ವರನನ್ನು ವಧುವಿನ ಮನೆಗೆ ಹೋಗಲು ಬಿಡದೆ ಕಾರಿನಲ್ಲಿ ಕುಳ್ಳಿರಿಸಿ ನಗರಾದ್ಯಂತ ಈ ಕಿಡಿಗೇಡಿಗಳು ಸುತ್ತಾಡಿಸಿ ಕೀಟಲೆ ನೀಡಿದ್ದರು. ಕಾಸರಗೋಡು ಸಿಐ ಅಬ್ದುರ್ರಹೀಮ್‌ರ ನೇತೃತ್ವದಲ್ಲಿ ಹೀಗೆ ಮೂರು ಕಾರುಗಳಲ್ಲಿ ಸುತ್ತಾಡಿಸಿ ಕೀಟಲೆ ನೀಡಿದ ಹದಿಮೂರು ಮಂದಿಯನ್ನು ಈ ಹಿಂದೆ ಬಂಧಿಸಲಾಗಿತ್ತು. ನಂತರ ವರನನ್ನು ವಧುವಿನ ಮನೆಗೆ ತಲುಪಿಸಿದ ಬಳಿಕ ಕೀಟಲೆ ನೀಡಿದ ಯುವಕರನ್ನು ರಾತ್ರಿ ಪೂರಾ ಪೊಲೀಸ್ ಠಾಣೆಯಲ್ಲಿ ಕುಳ್ಳಿರಿಸಲಾಗಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಲಂಕರಿಸಿದ ವಧುವಿನ ಕೋಣೆಗೆ ನುಗ್ಗಿ ಅದನ್ನು ಪುಡಿಗುಟ್ಟುವುದು ವರನ ಜೊತೆ ಬರುವ ಗೆಳೆಯರೆನ್ನುವವರ ಮೋಜು ಆಗಿದೆ. ವರನನ್ನು ಮತ್ತು ವಧುವನ್ನು ಮನೆಗೆ ಹೋಗಲು ಬಿಡದೆ ಕಾರಿನಲ್ಲಿ ಸುತ್ತಾಡಿಸಿ ಕೀಟಲೆ ನೀಡುವುದು ಇತ್ತೀಚೆಗೆ ಆರಂಭವಾದ ಸಂಪ್ರದಾಯ ಎನ್ನಲಾಗಿದೆ.ವರನನ್ನು ವಧುವಿನ ಮನೆಯವರಿಗೆ ಬಿಟ್ಟುಕೊಡಲಿಕ್ಕಾಗಿ 25ಸಾವಿರ ರೂಪಾಯಿ ವರೆಗೂ ನೀಡಬೇಕಾಗಿ ಬಂದ ದುರನುಭವವನ್ನು ಒಬ್ಬ ವಧುವಿನ ಪೋಷಕರು ವಿವರಿಸಿದ್ದಾರೆ. ವಿವಾಹ ದಿನದ ಆಭಾಸಗಳಿಂದಾಗಿ ವಧುವರರ ಮನೆಯವರ ನಡುವೆ ಸೃಷ್ಟಿಯಾದ ಭಿನ್ನಾಭಿಪ್ರಾಯಗಳ ಪರಿಣಾಮ ವಿವಾಹ ವಿಚ್ಛೇದನ ನಡೆದಘಟನೆಯೂ ಈ ಹಿಂದೆ ಕಾಸರಗೋಡಿನಲ್ಲಿ ನಡೆದಿದೆ ಎನ್ನುವವರು ಇದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News