ತಾಯಿಯ ಮೃತದೇಹವನ್ನು ಟ್ರಾಲಿ ರಿಕ್ಷಾದಲ್ಲಿ ಸಾಗಿಸಿದ ಬಡ ಯುವಕ
ಹೊಸದಿಲ್ಲಿ, ಸೆ.20: ಸೂಕ್ತ ಸಾರಿಗೆ ಹಾಗೂ ಆರೋಗ್ಯ ಸೇವಾ ಸೌಲಭ್ಯಗಳಿಲ್ಲದ ಒಡಿಶಾದಲ್ಲಿ ಇನ್ನೊಂದು ಹೃದಯವಿದ್ರಾವಕ ಘಟನೆ ವರದಿಯಾಗಿದೆ. ರಾಜ್ಯದ ಜಜ್ಪುರ ಜಿಲ್ಲಾಸ್ಪತ್ರೆಯಲ್ಲಿ ಪನಾ ತಿರಿಕಾ ಎಂಬ ಮಹಿಳೆ ಮೃತ ಪಟ್ಟಾಗ ಆಕೆಯ ಮೃತದೇಹವನ್ನು ಮನೆಗೆ ಸಾಗಿಸಲು ಖಾಸಗಿ ವಾಹನಗಳು ಬೇಡಿಕೆಯಿಟ್ಟ ದೊಡ್ಡ ಮೊತ್ತ ನೀಡಲು ಆಕೆಯ ಬಡ ಕುಟುಂಬಕ್ಕೆ ಸಾಧ್ಯವಾಗದೇ ಇದ್ದಾಗ ಆಕೆಯ ಪುತ್ರ ಗುಣ ತಿರಿಕಾ ಉಪಾಯವಿಲ್ಲದೆ ತಾಯಿಯ ಶವವನ್ನು ಟ್ರಾಲಿ ರಿಕ್ಷಾದಲ್ಲಿ ಆಸ್ಪತ್ರೆಯಿಂದ ಸುಮಾರು 4 ಕಿಮೀ ದೂರವಿರುವ ಅಂಕುಲ ಗ್ರಾಮದಲ್ಲಿರುವ ತನ್ನ ಮನೆಯ ತನಕ ಸಾಗಿಸಿದ್ದಾನೆ.
ನಮಗೆ ಯಾವುದೇ ಸಾರಿಗೆ ಸೌಲಭ್ಯ ದೊರೆಯಲಿಲ್ಲ. ಖಾಸಗಿ ವಾಹನಗಳು ದೊಡ್ಡ ಮೊತ್ತದ ಬೇಡಿಕೆಯಿಟ್ಟವು. ಕೊನೆಗೆ ಉಪಾಯವಿಲ್ಲದೆ ಟ್ರಾಲಿ ರಿಕ್ಷಾದ ಮೊರೆ ಹೋದೆವು, ಎಂದು ಕುಟುಂಬ ಸದಸ್ಯರೊಬ್ಬರು ವಿವರಿಸಿದ್ದಾರೆ.
ಮೂಲಗಳ ಪ್ರಕಾರ ವಿಶ್ವಕರ್ಮ ಪೂಜೆಯ ನಿಮಿತ್ತ ಜಜ್ಪುರ ಜಿಲ್ಲಾಸ್ಪತ್ರೆಯಲ್ಲಿ ಆ ದಿನ ಯಾವುದೇ ಅಂಬ್ಯುಲೆನ್ಸ್ ದೊರೆತಿರಲಿಲ್ಲ. ಅತ್ತ ಜಜ್ಪುರ ಜಿಲ್ಲೆಯ ಸಹಾಯಕ ವೈದ್ಯಾಧಿಕಾರಿ ಶಿಬಶಿಶ್ ಮಹರಾಣ ಅವರ ಪ್ರಕಾರ ಮಹಿಳೆಯ ಕುಟುಂಬದ ನಾಲ್ಕೈದು ಮಂದಿ ಸದಸ್ಯರಿದ್ದರೂ ಯಾರು ಕೂಡ ಮೃತದೇಹ ಸಾಗಿಸಲು ವಾಹನ ವ್ಯವಸ್ಥೆ ಬೇಕೆಂದು ಕೇಳಿಲ್ಲ.
ಕೆಲ ವಾರಗಳ ಹಿಂದೆ ದಾರಿ ಮಧ್ಯದಲ್ಲಿ ಅಂಬ್ಯುಲೆನ್ಸ್ ಚಾಲಕನೊಬ್ಬ ಇಳಿಸಿ ಹೋಗಿದ್ದರಿಂದ ತಂದೆಯೊಬ್ಬ ತನ್ನ ಏಳು ವರ್ಷದ ಪುತ್ರಿಯ ಮೃತದೇಹವನ್ನು ಹೆಗಲಲ್ಲಿ ಹೊತ್ತುಕೊಂಡು ಮನೆಯತ್ತ ಸಾಗಿದ ಘಟನೆ ಘುಸಪಲ್ಲಿ ಗ್ರಾಮದಿಂದ ವರದಿಯಾಗಿತ್ತು.
ಇದಕ್ಕೂ ಮುಂಚೆ ಇನ್ನೊಂದು ಗ್ರಾಮದಲ್ಲಿ ದಾನ ಮಂಜಿಯೆಂಬ ವ್ಯಕ್ತಿಗೆ ಸರಕಾರಿ ಆಸ್ಪತ್ರೆಯೊಂದರಲ್ಲಿ ಆಂಬ್ಯುಲೆನ್ಸ್ ಸೇವೆ ನಿರಾಕರಿಸಿದ್ದರಿಂದ ಆತ ತನ್ನ ಪತ್ನಿಯ ದೇಹವನ್ನು 10 ಕಿ.ಮೀ. ದೂರದ ತನಕ ಹೊತ್ತುಕೊಂಡು ಸಾಗಿದ್ದ.