ದೋಣಿಗಳಿಗೆ ಸೀಮೆಎಣ್ಣೆ ದೊರಕಿಲ್ಲ: ಗಿಲ್‌ನೆಟ್ ಮೀನುಗಾರರ ಸಂಘ ಆರೋಪ
ಮಂಗಳೂರು, ಸೆ.20: ಮೀನುಗಾರಿಕಾ ಇಲಾಖೆಯು ದೋಣಿಗಳಿಗೆ ನೀಡುವ ಸೀಮೆಎಣ್ಣೆಯನ್ನು ಪ್ರಸಕ್ತ ವರ್ಷದಲ್ಲಿ ಸಕಾಲಕ್ಕೆ ವಿತರಿಸಿಲ್ಲ. ಇಲ್ಲಿವರೆಗೆ ಸರಕಾರದಿಂದ ಸೀಮೆಎಣ್ಣೆ ಬಿಡುಗಡೆ ಆದೇಶ ಬಂದಿಲ್ಲ ಎಂದು ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಆರೋಪ ಮಾಡಿದ ಸಂಘದ ಅಧ್ಯಕ್ಷ ಅಲಿಹಸನ್, ಜಿಲ್ಲೆಯಲ್ಲಿ ಸುಮಾರು 1,300 ದೋಣಿಗಳು ಮೀನುಗಾರಿಕೆ ನಡೆಸುತ್ತಿದ್ದು, ಸುಮಾರು 15,000ಕ್ಕೂ ಅಧಿಕ ಬಡ ಮೀನುಗಾರರು ತಮ್ಮ ಕುಟುಂಬ ಜೀವನವನ್ನು ಇದರಿಂದಲೇ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ವರ್ಷ ಇಲಾಖೆಯು ದೋಣಿಗಳಿಗೆ ನೀಡಬೇಕಾದ ಸೀಮೆಎಣ್ಣೆಯನ್ನು ವಿತರಿಸದಿರುವುದರಿಂದ ಮೀನುಗಾರರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದರು.
ಸಮುದ್ರದ ಅಳಿವೆ ಬಾಗಿಲಲ್ಲಿ ಹೂಳು ತುಂಬಿ, ದೋಣಿಗಳು ಮೀನುಗಾರಿಕೆಗೆ ತೆರಳುವಾಗ ಮರಳು ದಂಡೆಗೆ ತಾಗಿ ಅಪಘಾತಕ್ಕೊಳಗಾಗುತ್ತಿವೆ. ಇದರಿಂದಾಗಿ ಹಲವು ಮೀನುಗಾರರು ಜೀವ ಕಳೆದುಕೊಂಡ ನಿದರ್ಶನಗಳಿವೆ. ಶೀಘ್ರ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮೀನುಗಾರಿಕಾ ಉಪನಿರ್ದೇಶಕರ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರಿನಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಗೌರವಾಧ್ಯಕ್ಷ ಸತೀಶ್ ಕೋಟ್ಯಾನ್, ಪ್ರ.ಕಾರ್ಯದರ್ಶಿ ಬಿ.ಎ. ಬಶೀರ್, ಸಹ ಕಾರ್ಯದರ್ಶಿ ಸುಭಾಸ್‌ಚಂದ್ರ ಕಾಂಚನ್, ಉಪಾಧ್ಯಕ್ಷ ಪ್ರಾಣೇಶ್ ಉಪಸ್ಥಿತರಿದ್ದರು.