ಬೆಳುವಾಯಿ, ಕಲ್ಲಮುಂಡ್ಕೂರು ಆರೋಗ್ಯ ಕೇಂದ್ರಕ್ಕೆ ಮಾನವ ಹಕ್ಕು ಸಂಘಟನೆ ಭೇಟಿ
ಮೂಡುಬಿದಿರೆ, ಸೆ.20: ಅವ್ಯವಸ್ಥೆ ಹಾಗೂ ಸಮಸ್ಯೆಗಳ ಆಗರವಾಗಿರುವ ಬೆಳುವಾಯಿ ಮತ್ತು ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳೂರು ತಾಲೂಕು ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನ ಸಂಘಟನೆಯ ಪದಾಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳುವಾಯಿ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರತ ವೈದ್ಯರು ಇಲ್ಲದಿದ್ದುದರಿಂದ ಆಸ್ಪತ್ರೆಗೆ ಬಂದ ಹಲವಾರು ರೋಗಿಗಳು ಚಿಕಿತ್ಸೆ ಸಿಗದೆ ವಾಪಸ್ ತೆರಳುತ್ತಿರುವುದು ಕಂಡುಬಂತು. ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆ ಹಾಗೂ ಆಸ್ಪತ್ರೆಯ ಆವರಣದಲ್ಲಿ ಗಿಡ ಗಂಟಿಗಳು ಆವರಿಸಿರುವುದು ಕಂಡುಬಂತು.
ಈ ವೇಳೆ ಉಪಸ್ಥಿತರಿದ್ದ ಪಂಚಾಯತ್ ಸದಸ್ಯ ಪ್ರವೀಣ್ ಮಾತನಾಡಿ, ಇಲ್ಲಿನ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ರೋಗಿಗಳೊಂದಿಗೆ ಉಡಾಫೆಯಿಂದ ವರ್ತಿಸುತ್ತಾರೆ. ಇಲ್ಲಿನ ವೈದ್ಯರನ್ನು ಬದಲಾಯಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಬೇರೆ ವೈದ್ಯರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಕಲ್ಲಮುಂಡ್ಕೂರು ಆಸ್ಪತ್ರೆಯ ವೈದ್ಯಾಧಿಕಾರಿ ಅವರು ಟ್ರೈನಿಂಗ್‌ಗೆ ತೆರಳಿರುವ ಬಗ್ಗೆ ದಾಖಲೆಗಳಿಂದ ತಿಳಿದು ಬಂತು. ಸಿಬ್ಬಂದಿ ಕೊರತೆಗಳಿರುವ ಬಗ್ಗೆ ತಿಳಿದು ಬಂದಿದೆ. ಉಳಿದಂತೆ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ.
ಸಂಸ್ಥೆಯ ತಾಲೂಕು ಅಧ್ಯಕ್ಷ ರತ್ನಾಕರ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಸುಭಾಶ್ ಕಾಫಿಕಾಡು, ಸಹ ಕಾರ್ಯದರ್ಶಿ ಪಾರ್ವತಿ, ಸದಸ್ಯರಾದ ಸುರೇಶ್, ಸುಖಾನಂದ ಶೆಟ್ಟಿ, ಮೋಹಿನಿ ಮತ್ತು ಮುಹಮ್ಮದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಳುವಾಯಿ ವೈದ್ಯಾಧಿಕಾರಿ ಅವರು ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಮತ್ತು ಉಡಾಫೆಯಿಂದ ವರ್ತಿಸಿರುವುದರ ಬಗ್ಗೆ ಸಾರ್ವಜನಿಕರಿಂದ ತಮಗೆ ತಿಳಿದು ಬಂದಿರುವುರಿಂದ ಪರಿಶೀಲನೆಗೆ ಬಂದಿದ್ದೇವೆ. ಪರಿಶೀಲನೆಯ ಸಂದರ್ಭದಲ್ಲಿಯೂ ವೈದ್ಯಾಧಿಕಾರಿ ಕರ್ತವ್ಯದಲ್ಲಿ ಇಲ್ಲದಿರುವುದರಿಂದ ಮೊಬೈಲ್ ಕರೆಯ ಮೂಲಕ ಸಂಪರ್ಕಿಸಿದಾಗ ಸರಿಯಾದ ಮಾಹಿತಿಯನ್ನು ನೀಡದೆ ಉಡಾಫೆಯಿಂದ ವರ್ತಿಸಿದ್ದಾರೆ. ಅಲ್ಲದೆ ಹಲವಾರು ಸಮಸ್ಯೆಗಳಿದ್ದು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗುವುದು.
-ರತ್ನಾಕರ ದೇವಾಡಿಗ