ಸೋಲು ಮತ್ತು ಸವಾಲುಗಳನ್ನು ಎದುರಿಸಿದಾಗ ಅನುಭವ ಪಕ್ವ: ಎಂ.ಎನ್.ರಮೇಶ್
ಪುತ್ತೂರು, ಸೆ.20: ಸೋಲು ಮತ್ತು ಸವಾಲುಗಳು ಜೀವನದ ಒಂದು ಭಾಗ. ಇದನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಅನುಭವಗಳು ಪಕ್ವವಾಗುತ್ತವೆ. ಮತ್ತು ಜೀವನದಲ್ಲಿ ಯಶಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ತಲ್‌ರಾಕ್ ಕನ್‌ಸ್ಟ್ರಕ್ಷನ್ ಕೆಮಿಕಲ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್.ರಮೇಶ್ ಹೇಳಿದ್ದಾರೆ.
ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ಎಂಬಿಎ ಸ್ನಾತಕೋತ್ತರ ವಿಭಾಗದ ನೂತನ ವಿದ್ಯಾರ್ಥಿಗಳ ಸ್ವಾಗತ ಮತ್ತು ವಿಕಸನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಿರಾಶೆ, ಹತಾಶೆ, ಪಕ್ಷಪಾತ ಮತ್ತು ಬೇರ್ಪಡಿಸುವಿಕೆಗಳಿಂದ ದೂರವಿದ್ದು ಜೀವನದಲ್ಲಿ ಗುರಿ ಸಾಧಿಸಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿವೇಕಾನಂದ ವಿಧ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ ಜಿ. ಅಧ್ಯಕ್ಷತೆ ವಹಿಸಿದ್ದರು. ಅವಕಾಶಗಳು ಹುಡುಕಿಕೊಂಡು ಬರಲು ಸಾಧ್ಯವಿಲ್ಲ. ಲಭ್ಯವಾದಾಗ ಅದನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇ ಗೌಡ ಮಾತನಾಡಿದರು. ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ.ಆಶ್ಲೆ ಡಿಸೋಜ ಸ್ವಾಗತಿಸಿದರು. ಉಪನ್ಯಾಸಕಿ ಪ್ರೊ.ಶುಭದಾ ರಾವ್ ವಂದಿಸಿದರು. ವಿದ್ಯಾರ್ಥಿನಿ ಮೇಘಾ ಕಾರ್ಯಕ್ರಮ ನಿರೂಪಿಸಿದರು.