ಹೃದಯ ಶ್ರೀಮಂತಿಕೆ ಮೆರೆದ ಸಿರಿವಂತ ಜಾರ್ಜ್ ಸೊರೋಸ್
ವಾಶಿಂಗ್ಟನ್, ಸೆ. 20: ವಲಸಿಗರು ಮತ್ತು ನಿರಾಶ್ರಿತರ ಅಗತ್ಯಗಳನ್ನು ಪೂರೈಸುವುದಕ್ಕಾಗಿ 500 ಮಿಲಿಯ ಡಾಲರ್ (ಸುಮಾರು 3,350 ಕೋಟಿ ರೂಪಾಯಿ) ಮೊತ್ತವನ್ನು ಹೂಡಿಕೆ ಮಾಡುವುದಾಗಿ ಅಮೆರಿಕದ ಬಿಲಿಯಾಧೀಶ ಹೂಡಿಕೆದಾರ ಜಾರ್ಜ್ ಸೊರೊಸ್ ಭರವಸೆ ನೀಡಿದ್ದಾರೆ.
‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಅವರು ಈ ದೇಣಿಗೆಯನ್ನು ಘೋಷಿಸಿದ್ದಾರೆ.
ವಲಸಿಗ ಬಿಕ್ಕಟ್ಟನ್ನು ಎದುರಿಸಲು ಸಹಾಯ ಮಾಡುವಂತೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ದೇಶದ ಕಂಪೆನಿಗಳಿಗೆ ನೀಡಿರುವ ಕರೆಗೆ ಓಗೊಟ್ಟು ಸೊರೊಸ್ ಈ ಕ್ರಮ ತೆಗೆದುಕೊಂಡಿದ್ದಾರೆ.
ತನ್ನ ಹೂಡಿಕೆಗಳನ್ನು ಯಾವ ರೀತಿಯಲ್ಲಿ ಬಳಸಬಹುದು ಎನ್ನುವ ವಿಚಾರದಲ್ಲಿ ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿನ ಹೈಕಮಿಶನರ್ ಕಚೇರಿ ಮತ್ತು ಅಂತಾರಾಷ್ಟ್ರೀಯ ರಕ್ಷಣಾ ಸಮತಿಗಳ ಜೊತೆಗೂಡಿ ಕೆಲಸ ಮಾಡುವುದಾಗಿ ‘ಓಪನ್ ಸೊಸೈಟಿ ಫೌಂಡೇಶನ್ಸ್’ನ ಸ್ಥಾಪಕರೂ ಆಗಿರುವ ಸೊರೊಸ್ ತಿಳಿಸಿದರು.
ಸಿರಿಯದಲ್ಲಿ ಅಮೆರಿಕ, ರಶ್ಯ, ಸಿರಿಯ ಮತ್ತು ಬಂಡುಕೋರರ ನಡುವಿನ ಬಹುಪಕ್ಷೀಯ ಯುದ್ಧವಿರಾಮ ಮುಕ್ತಾಯಗೊಂಡ ಒಂದು ದಿನದ ಬಳಿಕ ಜಾರ್ಜ್ ಸೊರೊಸ್‌ರ ಘೋಷಣೆ ಹೊರಬಿದ್ದಿದೆ.