ವಲಸಿಗರನ್ನು ಕ್ಯಾಂಡಿ ಚಾಕೊಲೇಟ್ ಗೆ ಹೋಲಿಸಿದ ಟ್ರಂಪ್ ಪುತ್ರನಿಗೆ ಕಂಪೆನಿಯ ತಿರುಗೇಟು
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್, ಸಿರಿಯ ನಿರಾಶ್ರಿತರನ್ನು ‘ಸ್ಕಿಟಲ್ ಕ್ಯಾಂಡಿ’ (ಪೆಪ್ಪರ್‌ಮಿಂಟ್ ಗಾತ್ರದ ಅಮೆರಿಕದ ಸಿಹಿ ತಿಂಡಿ)ಗಳಿಗೆ ಹೋಲಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ಗ್ರಾಫಿಕೊಂದನ್ನು ಅವರು ಸೋಮವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
‘‘ನನ್ನಲ್ಲಿ ಒಂದು ತಟ್ಟೆ ತುಂಬಾ ಸ್ಕಿಟಲ್ ಕ್ಯಾಂಡಿಗಳಿವೆ. ನಾನು ನಿಮಗೆ ಹೇಳುತ್ತೇನೆ- ಇದರಲ್ಲಿ ಮೂರು ಕ್ಯಾಂಡಿಗಳು ಮಾತ್ರ ನಿಮ್ಮನ್ನು ಕೊಲ್ಲುತ್ತವೆ. ಆಗ ನೀವು ಅದನ್ನು ತಿನ್ನಲು ಮುಂದೆ ಬರುತ್ತೀರಾ?’’ ಎಂಬುದಾಗಿ ಗ್ರಾಫಿಕ್ ಪ್ರಶ್ನಿಸಿದೆ.
‘‘ಇದು ನಮ್ಮ ಸಿರಿಯನ್ ನಿರಾಶ್ರಿತ ಸಮಸ್ಯೆ’’ ಎಂದು ಟ್ರಂಪ್ ಜೂನಿಯರ್ ಹೇಳಿದ್ದಾರೆ.
‘‘ಈ ಚಿತ್ರವೇ ಎಲ್ಲವನ್ನೂ ಹೇಳುತ್ತದೆ’’ ಎಂದು ಗ್ರಾಫಿಕ್ಸ್‌ನ ಮೇಲ್ಭಾಗದಲ್ಲಿ ಟ್ರಂಪ್ ಜೂನಿಯರ್ ಬರೆದಿದ್ದಾರೆ ಎಂದು ‘ಸಿಬಿಎಸ್ ನ್ಯೂಸ್’ ವರದಿ ಮಾಡಿದೆ.
ಅಮೆರಿಕ ಪ್ರವೇಶಿಸಲು ಸಿರಿಯ ನಿರಾಶ್ರಿತರಿಗೆ ಅನುಮತಿ ನೀಡುವುದನ್ನು ಡೊನಾಲ್ಡ್ ಟ್ರಂಪ್ ಬಲವಾಗಿ ವಿರೋಧಿಸಿದ್ದಾರೆ. ಆರಂಭದಲ್ಲಿ, ಅಮೆರಿಕಕ್ಕೆ ಮುಸ್ಲಿಮರು ಪ್ರವೇಶಿಸುವುದನ್ನು ನಿರ್ಬಂಧಿಸಬೇಕು ಎಂಬುದಾಗಿ ಟ್ರಂಪ್ ಹೇಳಿದ್ದರು. ಬಳಿಕ, ಈ ಹೇಳಿಕೆಯನ್ನು ಮಾರ್ಪಡಿಸಿ, ಅಮೆರಿಕ, ಯುರೋಪ್ ಮತ್ತು ನಮ್ಮ ಮಿತ್ರ ದೇಶಗಳ ವಿರುದ್ಧ ಭಯೋತ್ಪಾದನೆ ನಡೆದ ಇತಿಹಾಸವಿರುವ ಜಗತ್ತಿನ ಪ್ರದೇಶಗಳ ಜನರು ಅಮೆರಿಕ ಪ್ರವೇಶಿಸುವುದನ್ನು ನಿರ್ಬಂಧಿಸಬೇಕು ಎಂದಿದ್ದರು.
ಹಿಲರಿ ತಿರುಗೇಟು
ಇದಕ್ಕೆ ತಕ್ಷಣ ತಿರುಗೇಟು ನೀಡಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರ ಪತ್ರಿಕಾ ಕಾರ್ಯದರ್ಶಿ ನಿಕ್ ಮೆರಿಲ್, ‘‘ಇದು ಅಸಹ್ಯಕರ’’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
ಜೂನಿಯರ್ ಟ್ರಂಪ್‌ರ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶವನ್ನು ಸೃಷ್ಟಿಸಿದೆ. ಸಿರಿಯದ ನಾಗರಿಕ ಯುದ್ಧದಲ್ಲಿ ಸಿಕ್ಕಿಹಾಕಿಕೊಂಡವರ ದಯನೀಯ ಚಿತ್ರಗಳನ್ನು ‘ಸ್ಕಿಟಲ್ಸ್’ ಕ್ಯಾಂಡಿಗಳೊಂದಿಗೆ ಕೆಲವರು ಟ್ವೀಟ್ ಮಾಡಿದ್ದಾರೆ.