ಮಲ್ಯ ಚೆಕ್ ಬೌನ್ಸ್ ಪ್ರಕರಣ: ಸೆ.22ಕ್ಕೆ ಮುಂದೂಡಿಕೆ

Update: 2016-09-20 14:13 GMT

ಹೈದರಾಬಾದ್,ಸೆ.20: ಮಾಜಿ ಮದ್ಯದ ದೊರೆ ವಿಜಯ ಮಲ್ಯ ವಿರುದ್ಧ ಜಿಎಂಆರ್ ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿ.(ಜಿಎಚ್‌ಐಎಎಲ್)ವು ದಾಖಲಿಸಿರುವ ಎರಡು ಚೆಕ್ ಅಮಾನ್ಯ ಪ್ರಕರಣಗಳನ್ನು ಮಂಗಳವಾರ ಇಲ್ಲಿಯ ತೃತೀಯ ವಿಶೇಷ ನ್ಯಾಯಾಲಯವು ಸೆ.22ಕ್ಕೆ ಮುಂದೂಡಿತು.

   ಜಿಎಚ್‌ಐಎಎಲ್ ನಿರ್ವಹಿಸುತ್ತಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಯ ಸೌಲಭ್ಯಗಳನ್ನು ಬಳಸಿಕೊಂಡಿದ್ದಕ್ಕಾಗಿ ಕಿಂಗ್‌ಫಿಷರ್ ಏರ್‌ಲೈನ್ಸ್ ಶುಲ್ಕವಾಗಿ ನೀಡಿದ್ದ ತಲಾ 50 ಲ.ರೂ.ಗಳ ಎರಡು ಚೆಕ್‌ಗಳು ಅಮಾನ್ಯಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ನ್ಯಾ.ಎಂ.ಕೃಷ್ಣರಾವ್ ಅವರು ಎ.20ರಂದು ಮಲ್ಯ ಮತ್ತು ಕಿಂಗ್‌ಫಿಷರ್‌ನ ಹಿರಿಯ ಅಧಿಕಾರಿ ರಘುನಾಥನ್ ಅವರನ್ನು ದೋಷಿಗಳೆಂದು ಘೋಷಿಸಿದ್ದರು.

ಕಿಂಗ್‌ಫಿಷರ್ ಏರ್‌ಲೈನ್ಸ್ ಮತ್ತು ಮಲ್ಯರ ಹೊಸ ವಿಳಾಸಗಳನ್ನು ಇನ್ನಷ್ಟೇ ಪಡೆದುಕೊಳ್ಳಬೇಕಾಗಿದೆ ಎಂದು ಜಿಎಚ್‌ಐಎಎಲ್ ಪರ ವಕೀಲರು ಇಂದು ನ್ಯಾಯಾಲಯದಲ್ಲಿ ನಿವೇದಿಸಿಕೊಂಡರು.

ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿರುವ ರಘುನಾಥನ್ ಕಳೆದ ಕೆಲವು ದಿನಗಳಲ್ಲಿ ಇಲ್ಲಿಯ ವಿವಿಧ ನ್ಯಾಯಾಲಯಗಳಿಗೆ ಹಾಜರಾಗಿ ತನ್ನ ವಿರುದ್ಧದ ವಾರಂಟ್‌ಗಳನ್ನು ರದ್ದು ಮಾಡಿಸಿಕೊಂಡಿದ್ದಾರೆ. ಸೆ.22ರಂದು ಅವರು ಇದೇ ನ್ಯಾಯಾಲಯ ಸಂಕೀರ್ಣದಲ್ಲಿರುವ ಬೇರೆ ನ್ಯಾಯಾಲಯಗಳಿಗೆ ಹಾಜರಾಗಲಿದ್ದಾರೆ ಎಂದೂ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ ರಘುನಾಥನ್ ಈ ನ್ಯಾಯಾಲಯದ ಎದುರು ಹಾಜರಾಗಿಲ್ಲ. ಹೀಗಾಗಿ ದೂರುದಾರರ ಮನವಿಯ ಮೇರೆಗೆ ಅವರ ಹಾಜರಾತಿಗಾಗಿ ಪ್ರಕರಣವನ್ನು ಸೆ.22ಕ್ಕೆ ಮುಂದೂಡುತ್ತಿರುವುದಾಗಿ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News