×
Ad

ಸುರತ್ಕಲ್-ಕಬಕ ರಸ್ತೆ ಅಭಿವೃದ್ಧಿಗೆ ಆರಂಭದಲ್ಲೇ ವಿಘ್ನ

Update: 2016-09-20 19:33 IST

ಬಂಟ್ವಾಳ, ಸೆ.20: ಜುಲೈ ತಿಂಗಳ ಅಂತ್ಯದಲ್ಲಿ ಶಿಲಾನ್ಯಾಸಗೊಂಡಿದ್ದ ಸುರತ್ಕಲ್-ಕಬಕ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಗೋಚರಿಸಿದೆ. ಬಿ.ಸಿ.ರೋಡು ಪೊಳಲಿ ಮಾರ್ಗ ಮಧ್ಯದ ಬಡಕಬೈಲುವಿನ ಅಗಲ ಕಿರಿದಾದ ಸ್ಥಳಗಳ ಇಕ್ಕೆಲಗಳಲ್ಲಿರುವ ನಿವಾಸಿಗಳು ರಸ್ತೆ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಬಿಡುಗಡೆಗೊಳಿಸಿದ ಸುರತ್ಕಲ್-ಕಬಕ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 18.83 ಕೋಟಿ ರೂ.ಬಿಡುಗಡೆಗೊಂಡಿದ್ದು, ಜುಲೈ 23ರಂದು ಪೊಳಲಿ ಸಮೀಪದ ಪುಂಚಮೆ ಎಂಬಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದ್ದರು. ಅದರಂತೆ ಈ ರಸ್ತೆಯ ಕಾಮಗಾರಿ ಕಳೆದ ಕೆಲವು ದಿನಗಳಿಂದ ಆರಂಭಗೊಂಡಿದ್ದು 5 ಮೀಟರ್ ಇರುವ ಈಗಿನ ರಸ್ತೆಯನ್ನು 7 ಮೀಟರ್ ಅಗಲೀಕರಣಕ್ಕೆ ಬಡಕಬೈಲು ಎಂಬಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಇಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಮನೆಗಳಿದ್ದು ಹಲವು ವರ್ಷಗಳಿಂದ ವಾಸ್ತವ್ಯವುಳ್ಳವರು ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕ ಅಗಲೀಕರಣಗೊಳಿಸಿ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಲ್ಲಿ ಪಟ್ಟು ಹಿಡಿದಿದ್ದಾರೆ. ಈ ಕುರಿತಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್ ಸ್ಥಳ ತನಿಖೆ ನಡೆಸಿದ್ದು ಸಾರ್ವಜನಿಕರ ಅಭಿಪ್ರಾಯಗಳನ್ನು ಆಲಿಸಿದ್ದಾರೆ.

ಪೊಳಲಿಯಿಂದ ಬಿ.ಸಿ.ರೋಡು ವರೆಗಿನ ರಸ್ತೆ ಅಗಲೀಕರಣಕ್ಕೆ ಹಲವು ವರ್ಷಗಳಿಂದ ಬೇಡಿಕೆಯಿದ್ದು ಸಚಿವ ಬಿ.ರಮಾನಾಥ ರೈಯವರ ಮುತುವರ್ಜಿಯಿಂದ ರಾಜ್ಯ ಸರಕಾರ ಲೋಕೋಪಯೋಗಿ ಇಲಾಖೆಯ ಮೂಲಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆಗೊಳಿಸಿದೆ. ಸದ್ಯಕ್ಕೆ ಬಡಕಬೈಲುವಿನಲ್ಲಿ ವಿರೋಧದ ಅಭಿಪ್ರಾಯಗಳು ಕೇಳಿಬಂದಿದ್ದು ಸದ್ರಿ ರಸ್ತೆಯ ಹಲವೆಡೆಗಳಲ್ಲಿ ಅಗಲೀಕರಣಕ್ಕೆ ನಕಾರ ಧೋರಣೆ ಎದುರಾಗುವ ಸಾಧ್ಯತೆ ಇದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಕಾಮಗಾರಿಯಲ್ಲಿ ಖಾಸಗಿ ಜಮೀನುಗಳ ಭೂಸ್ವಾಧೀನಕ್ಕೆ ಅವಕಾಶವಿಲ್ಲ. ಹಾಗಾಗಿ ಇಲ್ಲಿ ಪರಿಹಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸರಕಾರಿ ಜಮೀನುಗಳನ್ನು ಗುರುತು ಮಾಡಿ ರಸ್ತೆ ಅಗಲೀಕರಣ ನಡೆಸುತ್ತೇವೆ. ಬಡಕಬೈಲುವಿನಲ್ಲಿ ಸ್ಥಳೀಯರಿಂದ ಆಕ್ಷೇಪ ಎದುರಾಗಿದೆ. ಈ ಕುರಿತಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.

- ಉಮೇಶ್ ಭಟ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬಂಟ್ವಾಳ

ಸುರತ್ಕಲ್-ಕಬಕ ವರೆಗಿನ ರಸ್ತೆಯನ್ನು 5 ಮೀಟರ್‌ನಿಂದ 7 ಮೀಟರ್‌ಗೆ ಅಭಿವೃದ್ಧಿಗೊಳಿಸುವ ಕಾಮಗಾರಿ ನಡೆಯುತ್ತಿದೆ. ರಸ್ತೆ ಅಗಲೀಕರಣ ಕಾಮಗಾರಿಯಿಂದ ಹಲವು ಮಂದಿ ಹಲವಾರು ವರ್ಷಗಳಿಂದ ವಾಸವಾಗಿರುವ ಮನೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅಭಿವೃದ್ಧಿ ಕಾಮಗಾರಿ ನಮ್ಮ ವಿರೋಧವಿಲ್ಲ. ರಸ್ತೆಯಿಂದ ಮನೆ ಕಳೆದುಕೊಳ್ಳುವವರಿಗೆ ಪ್ರತ್ಯೇಕ ವ್ಯವಸ್ಥೆ ಅಥವಾ ಪರಿಹಾರ ಕಲ್ಪಿಸಿದ ಬಳಿಕ ಕಾಮಗಾರಿ ಮುಂದುವರಿಸಬೇಕು.

-ಶೇಕ್ ಮೋನು, ರಿಕ್ಷಾ ಚಾಲಕ ಬಡಕ ಬೈಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News