ದೇಶದ ಅಭಿವೃದ್ಧಿಯಲ್ಲಿ ಕೃಷಿಯ ಪಾತ್ರ ಪ್ರಮುಖ : ಪ್ರೊ. ಎಂ. ಮಹದೇವಪ್ಪ

Update: 2016-09-20 14:14 GMT

ಕೊಣಾಜೆ, ಸೆ.20: ಕೃಷಿಯಲ್ಲಿ ಚೀನ, ಭಾರತ, ಬ್ರೆಝಿಲ್‌ನಲ್ಲಿ ಉತ್ತಮ ಸಾಧನೆ ಕಾಣಬಹುದು. ಹಾಗಿದ್ದರೂ ಭಾರತಕ್ಕೆ ಹೋಲಿಸಿದರೆ ಚೀನಾ ಕಡಿಮೆ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಿನ ಬೆಳೆ ಉತ್ಪತ್ತಿ ಮಾಡುತ್ತಿದ್ದು ಅದಕ್ಕೆ ಕೃಷಿಯಲ್ಲಿ ನಡೆಯುತ್ತಿರುವ ಸಂಶೋಧನೆ ಹಾಗೂ ಉನ್ನತ ತಂತ್ರಜ್ಞಾನದ ಬಳಕೆ ಮುಖ್ಯ ಕಾರಣ. ಒಟ್ಟಿನಲ್ಲಿ ಯಾವುದೇ ದೇಶದಲ್ಲೂ ಅಗ್ರಿಕಲ್ಚರ್’ ಎಂಬುದು ಆ ದೇಶದ ಅಭಿವೃದ್ದಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಪದ್ಮಭೂಷಣ ಪ್ರೊ. ಎಂ.ಮಹದೇವಪ್ಪಹೇಳಿದ್ದಾರೆ.

ಅವರು ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಂಗಳವಾರ ವಿ.ವಿ.ಯ ಮಂಗಳಾ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.

ರೈತರ ಜ್ಞಾನದ ಮುಂದೆ ಯಾವುದೇ ವಿಜ್ಞಾನಿ ಸಮನಾಗಿಲ್ಲ. ಸುಮಾರು 10ಲಕ್ಷಕ್ಕೂ ಅಧಿಕ ಉತ್ಪನ್ನಗಳನ್ನು ಕಂಡುಹಿಡಿದವರು ರೈತರು. ಭಾರತದಲ್ಲಿಯೇ ಒಂದು ಲಕ್ಷ ವಿವಿಧ ಬಗೆಯ ಉತ್ಪತ್ತಿಗೆ ಕಾರಣರಾಗಿದ್ದಾರೆ. ಆದ್ದರಿಂದ ಭಾರತದಲ್ಲಿ ಕೃಷಿ ಕ್ಷೇತ್ರದ ಸಾಧನೆ ಮಹತ್ತರವಾದದ್ದು. ನೂತನ ತಂತ್ರಜ್ಞಾನದೊಂದಿಗೆ ಇನ್ನಷ್ಟು ಅಭಿವೃದ್ಧಿ ಈ ಕ್ಷೇತ್ರದಲ್ಲಿ ನಡೆಯಬೇಕು ಎಂದು ಹೇಳಿದರು.

ದೇಶದ ಹಸಿರು ಕ್ರಾಂತಿಗೆ ನಾಂದಿ ಹಾಡಿದ್ದು ದಕ್ಷಿಣ ಕನ್ನಡ ಜಿಲ್ಲೆ. ಕಾಟನ್ ಉತ್ಪತ್ತಿಯಲ್ಲಿ ಭಾರತ 2002ರಲ್ಲಿ ಐದನೆ ಸ್ಥಾನದಲ್ಲಿತ್ತು. ಈಗ ಎರಡನೆ ಸ್ಥಾನಕ್ಕೆ ಬಂದು ನಿಂತಿರುವುದಲ್ಲದೆ ಹಿಂದೆ ಆಮದು ಮಾಡುತ್ತಿದ್ದ ನಾವು ಈಗ ರಫ್ತು ಮಾಡುತ್ತಿದ್ದು ನಿಜಕ್ಕೂ ಶ್ಲಾಘನೀಯ ಸಾಧನೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ ಮಂಗಳೂರು ವಿ.ವಿ. ಕುಲಪತಿ ಪ್ರೊ.ಕೆ. ಬೈರಪ್ಪಮಾತನಾಡಿ, ಶಿಕ್ಷಕರು ದೇಶವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ತರಗತಿಯ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದರ ಜೊತೆಗೆ ಸುದೃಢ ಹಾಗೂ ಬಲಿಷ್ಠ ಬಾರತ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಎನ್.ಆರ್. ಶೆಟ್ಟಿ ಹಾಗೂ ಬೆಂಗಳೂರಿನ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್‌ನ ರಾಷ್ಟ್ರೀಯ ಪ್ರಾಧ್ಯಾಪಕ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪಿ.ಜಿ.ಚೆಂಗಪ್ಪರನ್ನು ಸನ್ಮಾನಿಸಲಾಯಿತು.

ಉತ್ತಮ ಶಿಕ್ಷಕ ಪ್ರಶಸ್ತಿ

ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರತಿವರ್ಷ ಮಂಗಳೂರು ವಿ.ವಿ. ವತಿಯಿಂದ ನೀಡಲ್ಪಡುವ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಈ ಬಾರಿ ಸಾಗರ ಭೂವಿಜ್ಞಾನ ಅಧ್ಯಯನ ವಿಭಾಗದ ಡಾ. ಬಿ.ಆರ್. ಮಂಜುನಾಥ್, ಅರ್ಥಶಾಸ್ತ್ರ ವಿಭಾಗದ ಡಾ. ವಿಶ್ವನಾಥ್ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸಿ.ಕೆ. ಕಿಶೋರ್ ಕುಮಾರ್‌ರಿಗೆ ನೀಡಿ ಗೌರವಿಸಲಾಯಿತು.

ಪರೀಕ್ಷಾಂಗ ಕುಲಸಚಿವ ಡಾ.ಎ.ಎಂ. ಖಾನ್, ಹಣಕಾಸು ಅಧಿಕಾರಿ ಪ್ರೆೊ. ಶ್ರೀಪತಿ ಕಲ್ಲೂರಾಯ ಉಪಸ್ಥಿತರಿದ್ದರು.

ಮಂಗಳೂರು ವಿವಿ ಕುಲಸಚಿವ . ಕೆ.ಎಂ. ಲೋಕೇಶ್ ಸ್ವಾಗತಿಸಿದರು. ಪ್ರೊ.ಬಿ. ಶಿವರಾಮ ಶೆಟ್ಟಿ ಹಾಗೂ ಪೆ್ರೆೊ. ಬಿ. ಸೋಮಣ್ಣ ಸನ್ಮಾನ ಪತ್ರ ವಾಚಿಸಿದರು. ವಿವಿಯ ಆಂಗ್ಲಭಾಷಾ ವಿಭಾಗ ಪ್ರಾಧ್ಯಾಪಕ ಪ್ರೊ. ರವಿಶಂಕರ್ ರಾವ್ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News