ಗಾಂಜಾ ಸೇವನೆ ಮತ್ತು ಮಾರಾಟ: ನಾಲ್ವರ ಬಂಧನ
ಕೊಣಾಜೆ, ಸೆ.20: ಬೋಳಿಯಾರ್ ಗ್ರಾಮದ ರಂತಡ್ಕ ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂವರನ್ನು ಕೊಣಾಜೆ ಪೊಲೀಸರು ಶನಿವಾರ ಬಂಧಿಸಿದ್ದು, ಇದರೊಂದಿಗೆ ಗಾಂಜಾ ಸಾಗಾಟ ಮತ್ತು ಸೇವನೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಗಾಂಜಾ ಸಾಗಾಟ ಮತ್ತು ಸೇವನೆ ಮಾಡುತ್ತಿದ್ದ ಆರೋಪಿಯನ್ನು ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‌ನ ರಮೀಝ್ ಎಂದು ಗುರುತಿಸಲಾಗಿದೆ. ಬೊಳಿಯಾರ್ ಗ್ರಾಮದ ಜಂಕ್ಷನ್ ಬಳಿಯಲ್ಲಿ ಈತ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಮಂಗಳವಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನಿಂದ ಸುಮಾರು 730 ಗ್ರಾಂ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಕಾರ್ಯಾಚರಣೆ ಸಂದರ್ಭದಲ್ಲಿ ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋಳಿಯಾರ್ ಗ್ರಾಮದ ರಂತಡ್ಕ ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‌ನ ಸಮೀರ್ ಪಿ.(24), ತೌಡುಗೋಳಿ ಕ್ರಾಸ್‌ನ ಮಹಮ್ಮದ್ ಸಪಾಝ್(23) ಹಾಗೂ ಬೋಳಿಯಾರ್ ಜಾರದಗುಡ್ಡೆಯ ಅಬೂಬಕ್ಕರ್ ಯಾನೆ ಅಬ್ಬು(32)ಎಂಬವರನ್ನು ಕೊಣಾಜೆ ಪೊಲೀಸರು ಶನಿವಾರ ಬಂಧಿಸಿದ್ದರು. ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿದ್ದು ದೃಢಪಟ್ಟಿತ್ತು.
ಕಾರ್ಯಾಚರಣೆಯಲ್ಲಿ ಕೊಣಾಜೆ ಪೊಲೀಸ್ ಠಾಣಾ ನಿರೀಕ್ಷಕ ಅಶೋಕ್ ಪಿ., ಪಿಎಸ್ಸೈ ಸುಕುಮಾರನ್, ಸಿಬ್ಬಂದಿಯಾದ ಸಂತೋಷ್, ಶಿವಪ್ರಸಾದ್, ಜಗನ್ನಾಥ, ಚಂದ್ರಶೇಖರ, ನಾಗರಾಜ್ ಪಾಲ್ಗೊಂಡಿದ್ದರು. ಆರೋಪಿಗಳ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.