×
Ad

ಟ್ರಂಪ್ ಹೇಳಿದಂತೆ ವಲಸಿಗರು ಅಮೆರಿಕ ಭದ್ರತೆಗೆ ಅಪಾಯ ತಂದಿದ್ದಾರೆಯೇ?

Update: 2016-09-20 20:35 IST

ವಾಷಿಂಗ್ಟನ್: ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಪ್ರಚಾರದ ಬಹಳಷ್ಟು ಸಮಯವನ್ನು, ವಲಸಿಗರಿಂದ ದೇಶಕ್ಕೆ ಇರುವ ಭಯೋತ್ಪಾದನೆಯ ಅಪಾಯವನ್ನು ವಿವರಿಸಲು ವ್ಯಯಿಸಿದ್ದಾರೆ. ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವವರೆಗೂ ಮುಸ್ಲಿಮರು ಅಮೆರಿಕಕ್ಕೆ ವಲಸೆ ಬರುವುದನ್ನು ತಡೆಯಬೇಕು ಎಂಬ ಪ್ರಸ್ತಾವನೆ ಮುಂದಿಟ್ಟಿದ್ದರು.
ಆದರೆ ಇಲ್ಲಿ ಕಾಣೆಯಾಗಿರುವುದು, ಮುಸ್ಲಿಮರು ವಲಸೆ ಬಂದಿರುವುದರಿಂದ ಅಮೆರಿಕದ ಭಯೋತ್ಪಾದನೆಯ ಅಪಾಯ ಹೆಚ್ಚಿದೆ ಎನ್ನುವುದನ್ನು ಸಾಬೀತುಪಡಿಸುವ ಪುರಾವೆ. ಕ್ಯಾಟೊ ಇನ್‌ಸ್ಟಿಟ್ಯೂಟ್‌ನ ವಿಶ್ಲೇಷಕ ಅಲೆಕ್ಸ್ ನೌರಾಶ್ಚ್ ಈ ಬಗ್ಗೆ ಅಧ್ಯಯನ ನಡೆಸಿ, ವರದಿ ಬಿಡುಗಡೆ ಮಾಡಿದ್ದಾರೆ. ವಲಸಿಗರಿಂದ ಭಯೋತ್ಪಾದನೆಯ ಅಪಾಯ ಇರುವುದು ತೀರಾ ವಿರಳ ಎನ್ನುವ ಅಂಶವನ್ನು ಈ ವರದಿ ಬಹಿರಂಗಪಡಿಸಿದೆ.
ಕ್ಯಾಟೊ ಎನ್ನುವುದು ಉದಾರಿ ಚಿಂತಕರ ಕೂಟವಾಗಿದ್ದು, ವಲಸೆದಾರರ ಪರವಾದ ನಿಲುವನ್ನು ಹೊಂದಿದೆ. ಆದರೆ ನೌರಾಶ್ಚ್ ಅವರ ಅಧ್ಯಯನ ಪ್ರಬಲ ನೆಲೆಗಟ್ಟು ಹೊಂದಿದೆ. ಅವರು ವಿವಿಧ ಮೂಲಗಳಿಂದ ಭಯೋತ್ಪಾದನೆ ಹಾಗೂ ವಲಸೆ ಕುರಿತ ಮಾಹಿತಿಯನ್ನು 1975ರಿಂದ 2015ರವರೆಗೂ ಕಲೆ ಹಾಕಿದ್ದಾರೆ. ಅಮೆರಿಕ ನೆಲದಲ್ಲಿ ನಡೆದ ಭಯೋತ್ಪಾದನಾ ಕೃತ್ಯದಲ್ಲಿ ವಲಸೆದಾರರು ಎಷ್ಟು ಸಂಖ್ಯೆಯಲ್ಲಿ ಷಾಮೀಲಾಗಿದ್ದಾರೆ, ಇಂಥ ಕೃತ್ಯಗಳ ಸಂಚು ಮತ್ತು ಕಾರ್ಯಗತಗೊಳಿಸುವಲ್ಲಿ ಎಷ್ಟರ ಮಟ್ಟಿಗೆ ಅಮೆರಿಕದ ದೇಶೀಯ ಜನರು ಸಹಕರಿಸಿದ್ದಾರೆ ಎಂಬ ಮಾಹಿತಿಗಳನ್ನೂ ಸಂಗ್ರಹಿಸಿದ್ದಾರೆ.

ಅಚ್ಚರಿಯ ಅಂಶಗಳು ಈ ಅಧ್ಯಯನದಿಂದ ಬೆಳಕಿಗೆ ಬಂದಿವೆ. ವಲಸೆಯವರು ನಡೆಸಿದ ದಾಳಿಯ ಬಹುತೇಕ ಸಾವು (ಶೇ. 98.6) ಸೆಪ್ಟೆಂಬರ್ 11ರ ಘಟನೆಯಲ್ಲಷ್ಟೇ ಸಂಭವಿಸಿವೆ. ಇದನ್ನು ಹೊರತುಪಡಿಸಿದರೆ, ವಲಸೆಯವರ ಸಂಪರ್ಕ ಹೊಂದಿದ ಭಯೋತ್ಪಾದಕ ದಾಳಿ ತೀರಾ ವಿರಳ. ಸೆಪ್ಟೆಂಬರ್ 11ರ ಘಟನೆಯೂ ಸೇರಿದಂತೆ ವಲಸೆಯವರು ಪಾಲ್ಗೊಂಡ ಭಯೋತ್ಪಾದಕ ದಾಳಿಯಲ್ಲಿ ಪ್ರತಿ ವರ್ಷ ಮೃತಪಡುವ ಅಮೆರಿಕನ್ನರ ಸಂಭಾವ್ಯ ಸಂಖ್ಯೆ 36 ಲಕ್ಷಕ್ಕೆ ಒಬ್ಬರು. ಅದು ತೀರಾ ಅಲ್ಪ ಪ್ರಮಾಣ. ಈ ಕೆಳಗೆ ನೀಡಿರುವ ಕೋಷ್ಟಕದಲ್ಲಿ ರೈಲ್ವೆ ವಾಹನ ಡಿಕ್ಕಿಯಾಗಿ ಸಾಯುವ ಪಾದಚಾರಿಗಳು, ಬೆಂಕಿ ಆಕಸ್ಮಿಕದಲ್ಲಿ ಸಾಯುವವರು ಹಾಗೂ ವಲಸೆಯವರು ಷಾಮೀಲಾಗಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಸಾಯುವವರ ಸಂಖ್ಯೆಯನ್ನು ತುಲನೆ ಮಾಡಲಾಗಿದೆ.

ವಲಸೆಯವರು ಷಾಮೀಲಾಗಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಮತ್ತು ಇತರ ಅಪರೂಪದ ಆಕಸ್ಮಿಕದಲ್ಲಿ ಸಾಯುವವರರ ತುಲನೆ

ಸೆಪ್ಟೆಂಬರ್ 11ರ ಘಟನೆಯ ಅಂಕಿ ಅಂಶ ಹೊರತುಪಡಿಸಿದರೆ, ಇಂಥ ಭಯೋತ್ಪಾದಕ ಕೃತ್ಯಗಳಲ್ಲಿ ಸಾಯುವವರ ಪ್ರಮಾಣಕ್ಕಿಂತ ಸಿಡಿಲು ಬಡಿದು ಮೃತಪಡುವವರ ಸಂಖ್ಯೆ ಅಧಿಕ.
ಸೆಪ್ಟೆಂಬರ್ 11ರ ಘಟನೆಯಂಥ ದಾಳಿ ಸಾಧ್ಯತೆ ಇಂದಿನ ಪರಿಸ್ಥಿತಿಯಲ್ಲಿ ಅಸಂಭವ. ಇಂಥ ಸಂಚು ರೂಪಿಸುವುದು ಸದ್ಯದ ಪರಿಸ್ಥಿತಿಯಲ್ಲಿ ತೀರಾ ಕಷ್ಟ. ಇದಕ್ಕೆ ದೊಡ್ಡ ಪ್ರಮಾಣದ ಯೋಜನೆ, ಸಂಘಟನೆ ಹಾಗೂ ಸಿದ್ಧತೆ ಅಗತ್ಯವಾಗುತ್ತದೆ. ಅಂದರೆ ಇದನ್ನು ಪತ್ತೆ ಮಾಡುವುದು ಹಿಂದಿಗಿಂತ ಸುಲಭ. ಸೆಪ್ಟೆಂಬರ್ 11ರ ಘಟನೆ ಬಳಿಕ ಅಮೆರಿಕ ಸರ್ಕಾರ, ಇಂಥ ಸಂಚನ್ನು ಪತ್ತೆ ಮಾಡಲು ಹೆಚ್ಚಿನ ಸಂಪನ್ಮೂಲ ವ್ಯಯಿಸುತ್ತಿದೆ. ಒಬ್ಬ ವ್ಯಕ್ತಿ ಬಂದೂಕು ಖರೀದಿಸುವಲ್ಲಿಂದಲೇ ನಿಗಾ ವಹಿಸಲಾಗುತ್ತದೆ.
"ಹದಿನೈದು ವರ್ಷದಿಂದ ದೊಡ್ಡ ಪ್ರಮಾಣದ ಸಾವು ನೋವಿನ ಯಾವ ಘಟನೆಗಳೂ ನಡೆಯದಿರುವುದು ಅದೃಷ್ಟ ಮಾತ್ರವಲ್ಲ" ಎಂದು ಜಾರ್ಜ್‌ಟೌನ್ ವಿವಿಯ ಭಯೋತ್ಪಾದಕ ಚಟುವಟಿಕೆಗಳ ತಜ್ಞ ಡಾನ್ ಬೇಮನ್ ಹೇಳುತ್ತಾರೆ. "ಭಯೋತ್ಪಾದಕರ ಮೂಲಸೌಕರ್ಯಗಳ ಮೇಲೆ ಮಿಲಿಟರಿ ದಾಳಿ ನಡೆಸುವಂಥ ಅಮೆರಿಕ ಸರ್ಕಾರದ ಭಯೋತ್ಪಾದನಾ ವಿರೋಧಿ ಪ್ರಯತ್ನಗಳು, ಸಿಐಎ ನೇತೃತ್ವದ ಅಂತರರಾಷ್ಟ್ರೀಯ ಗುಪ್ತಚರ ಸಹಕಾರ, ಎಫ್‌ಬಿಐ ಆಂತರಿಕ ತನಿಖೆಗಳು, ದೇಶಿನೆಲ ಹಾಗೂ ಗಡಿ ಭದ್ರತಾ ವಿಭಾಗದ ಕ್ರಮಗಳು ಇದಕ್ಕೆ ಕಾರಣ"
ನೌರಾಶ್ಚ್ ಅವರು ತಮ್ಮ ಅಧ್ಯಯನ ವರದಿಯಲ್ಲಿ, ವೀಸಾ ಸ್ಥಿತಿಗತಿ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. ಅಂದರೆ ಉದಾಹರಣೆಗೆ ಭಯೋತ್ಪಾದಕರು ವಿದ್ಯಾರ್ಥಿ ವೀಸಾ ಪಡೆದವರೇ ಅಥವಾ ಗ್ರೀನ್‌ಕಾರ್ಡ್ ಹೊಂದಿದವರೇ ಎಂಬ ಬಗ್ಗೆ. ಸೆಪ್ಟೆಂಬರ್ 11ರ ಘಟನೆಗೆ ಕಾರಣರಾದ ಬಹುತೇಕ ಮಂದಿ ಬಂದಿರುವುದು ಪ್ರವಾಸಿ ವೀಸಾದಲ್ಲಿ.

ಆದರೆ ತೀರಾ ಕುತೂಹಕಕಾರಿ ಅಂಶವೆಂದರೆ, ನಿರಾಶ್ರಿತರ ವೀಸಾಗೆ ಸಂಬಂಧಿಸಿದ್ದು. ಐಸಿಸ್ ಸದಸ್ಯರು ವಲಸಿಗರಾಗಿ ನುಸುಳುತ್ತಿದ್ದಾರೆ ಎಂದು ಟ್ರಂಪ್ ಹಾಗೂ ಬ್ರಿಟ್‌ಬರ್ಟ್ ನ್ಯೂಸ್ ಭೀತಿ ಹುಟ್ಟಿಸಿರುವಂತೆ, ಈ ಬಗೆಯ ಘಟನೆಗಳು ತೀರಾ ಅಪರೂಪ. ನಿರಾಶ್ರಿತ ಭಯೋತ್ಪಾದಕರಿಂದ ಹತ್ಯೆಯಾಗುವ ಸಾಧ್ಯತೆ ಎಷ್ಟು ಗೊತ್ತೇ? 360 ಕೋಟಿಗೆ ಒಬ್ಬರು. 1975ರಿಂದ 2015ರವರೆಗೆ ಒಟ್ಟು 32,52,493 ನಿರಾಶ್ರಿತರು ಅಮೆರಿಕಕ್ಕೆ ವಲಸೆ ಬಂದಿದ್ದು, ಇವರ ಪೈಕಿ 20 ಮಂದಿ ಉಗ್ರರು, ಅಂದರೆ ಒಟ್ಟು ಪ್ರಮಾಣದ ಶೇಕಡ 0.00062ರಷ್ಟು. ಈ ಪೈಕಿ ಮೂವರು ಮಾತ್ರ ತಮ್ಮ ಸಂಚಿನಲ್ಲಿ ಸಫಲರಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ನೌರಾಶ್ಚ್ ವಿವರಿಸಿದ್ದಾರೆ.
2014ರಲ್ಲಿ ಚುನಾಯಿತ ರಿಪಬ್ಲಿಕನ್ನರು ಮಾಡಿದ ಪ್ರಚಾರದಿಂದಾಗಿ, ಐಸಿಸ್ ಉಗ್ರರು ಮೆಕ್ಸಿಕೊ ಗಡಿ ಮೂಲಕ ಪ್ರವೇಶಿಸುತ್ತಿದ್ದಾರೆ ಎಂಬ ಆತಂಕ ಅಮೆರಿಕದಲ್ಲಿ ವ್ಯಾಪಕವಾಗಿತ್ತು. ಇದನ್ನು ಕೂಡಾ ನೌರಾಶ್ಚ್ ಪರಿಶೀಲಿಸಿದ್ದು, ಎಷ್ಟು ಮಂದಿ ಅಕ್ರಮ ವಲಸೆಗಾರರು ಉಗ್ರರಾಗಿದ್ದಾರೆ ಎಂದು ಕಂಡುಹಿಡಿಯುವ ಪ್ರಯತ್ನ ನಡೆಸಿದ್ದಾರೆ.
ಇದಕ್ಕೆ ದೊರಕಿರುವ ಉತ್ತರ ಮತ್ತೆ ತೀರಾ ನಗಣ್ಯ. "ಕೇವಲ 10 ಮಂದಿ ಅಕ್ರಮ ವಲಸಿಗರು ಉಗ್ರರಾಗಿದ್ದಾರೆ. ಅಂದರೆ ಇದು ಒಟ್ಟು ಸಂಖ್ಯೆಯ 0.000038ರಷ್ಟು. ನಲುವತ್ತು ವರ್ಷಗಳಲ್ಲಿ 2.65 ಕೋಟಿ ಅಕ್ರಮ ವಲಸಿಗರು ಇದುವರೆಗೆ ಆಗಮಿಸಿದ್ದಾರೆ. ಈ ಪೈಕಿ ಅಹ್ಮದ್ ಅಜಾಜ್ ಎಂಬ ಒಬ್ಬ ಉಗ್ರ ಮಾತ್ರ ಅಮೆರಿಕನ್ ಪ್ರಜೆಯಲ್ಲಿ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಅವರು ವಿವರಿಸಿದ್ದಾರೆ.
ಆದ್ದರಿಂದ ಈ ಅಂಕಿ ಅಂಶಗಳು ತೀರಾ ಸ್ಪಷ್ಟ. ಸೆಪ್ಟೆಂಬರ್ 11ರ ಘಟನೆಗೆ ಪೂರ್ವದಲ್ಲಾಗಲೀ, ಆ ಬಳಿಕವಾಗಲೀ, ವಲಸೆಯವರು ಅಮೆರಿಕಕ್ಕೆ ಭಯೋತ್ಪಾದನಾ ಭೀತಿ ಹುಟ್ಟಿಸಿಲ್ಲ. ಆದ್ದರಿಂದ ಟ್ರಂಪ್ ಯಾಕೆ ಭಿನ್ನ ಚಿತ್ರಣ ನೀಡುತ್ತಿದ್ದಾರೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News