ಧರ್ಮಸ್ಥಳ: ಮದ್ಯವರ್ಜನ ಶಿಬಿರಕ್ಕೆ ಸಿದ್ಧತೆ
ಬೆಳ್ತಂಗಡಿ, ಸೆ.20: ಧರ್ಮಸ್ಥಳದಲ್ಲಿ 1,000ನೆ ಮದ್ಯವರ್ಜನ ಶಿಬಿರವು ಸೆ.24ರಿಂದ ಅ.1ರವರೆಗೆ ನಡೆಯಲಿದೆ. ಶಿಬಿರದ ಯಶಸ್ವಿಗೆ ಎಲ್ಲ ರೀತಿಯ ಸಿದ್ಧತೆ ಭರದಿಂದ ನಡೆಯುತ್ತಿದೆ. ಈ ಶಿಬಿರದಲ್ಲಿ ಸುಮಾರು ಎರಡು ಸಾವಿರ ವ್ಯಸನಮುಕ್ತರು ಮತ್ತು ಅವರ ಕುಟುಂಬದವರು ಭಾಗವಹಿಸಲಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅ.1ರಂದು ಬೃಹತ್ ಸಭೆ ನಡೆಯಲಿದ್ದು, ಅಂದು ಬೆಳಗ್ಗೆ ‘ಗಾಂಧಿ ಸ್ಮತಿ’ ಕಾರ್ಯಕ್ರಮದ ಅಂಗವಾಗಿ ಡಾ. ಎಂ. ಮೋಹನ ಆಳ್ವರ ನೇತೃತ್ವದಲ್ಲಿ ಮೆರವಣಿಗೆ ಆಯೋಜಿಸಲಾಗಿದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ವ್ಯಸನಮುಕ್ತರಿಗೆ 8 ಲಕ್ಷ ರೂ. ವೌಲ್ಯದ ಸಮವಸ್ತ್ರ ವಿತರಿಸುವರು. ಇದು ಗಾಂಧಿ ಟೋಪಿ, ಅಂಗಿಯನ್ನೊಳಗೊಂಡಿದೆ. ಶಿಬಿರಕ್ಕೆ ಪೂರ್ವಭಾವಿಯಾಗಿ ಸೆ.24 ರಿಂದ 30ರ ವರೆಗೆ ರಾಜ್ಯದ ಹತ್ತು ಕಡೆಗಳಲ್ಲಿ ಏಕ ಕಾಲದಲ್ಲಿ ಮದ್ಯ ವರ್ಜನ ಶಿಬಿರ ಆಯೋಜಿಸಲಾಗಿದೆ. ಪ್ರತಿ ಕೇಂದ್ರದ ತಲಾ ನೂರರಂತೆ ಒಂದು ಸಾವಿರ ವ್ಯಸನ ಮುಕ್ತರು ಮತ್ತು ಅವರ ಕುಟುಂಬದವರು ಅ.1ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಈವರೆಗೆ ನಡೆದ ಶಿಬಿರದಲ್ಲಿ 70,224 ಮಂದಿ ಮದ್ಯ ವ್ಯಸನ ಮುಕ್ತರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹರೀಶ್ ಪೂಂಜ, ಕೆ. ವಸಂತ ಸಾಲಿಯಾನ್, ಕಿಶೋರ್ ಹೆಗ್ಡೆ, ವಿವೇಕ್ ವಿ. ಪಾಸ್ ಮತ್ತು ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಉಪಸ್ಥಿತರಿದ್ದರು.