ಕ್ರಿಕೆಟರ್ ಕೈಫ್ ಶಾರ್ಪ್ ಶೂಟರ್ ಕ್ರಿಮಿನಲ್ ಆದ ಕತೆ !

Update: 2016-09-21 03:39 GMT

ಹೊಸದಿಲ್ಲಿ, ಸೆ. 21 : ಭಾರತದ ಖ್ಯಾತ ಕ್ರಿಕೆಟ್ ಆಟಗಾರ, ಹಾಲಿ ಛತ್ತೀಸ್ ಗಢ ರಣಜಿ ತಂಡದ ನಾಯಕ ಮೊಹಮ್ಮದ್ ಕೈಫ್ ತನಗೇ ಗೊತ್ತಿಲ್ಲದಂತೆ ಕುಖ್ಯಾತ ಶಾರ್ಪ್ ಶೂಟರ್ ಆಗಿ ಬದಲಾದ ಕತೆ ಇದು. ಒಮ್ಮೆಗೆ ನಮಗೆ ನಗು ಬಂದರೂ ಸಾಮಾಜಿಕ ಜಾಲತಾಣ ಹಾಗು ಮಾಧ್ಯಮಗಳ ಬೇಜವಾಬ್ದಾರಿತನ ಹೇಗೆ ವ್ಯಕ್ತಿಯ ಚಾರಿತ್ರ್ಯ ಹನನಕ್ಕೆ ದಾರಿಯಾಗುತ್ತದೆ ಎಂಬುದಕ್ಕೆ ಇದು ಒಂದು ಉತ್ತಮ ನಿದರ್ಶನ.

ಇತ್ತೀಚಿಗೆ ಬಿಹಾರದಲ್ಲಿ ಆರ್ ಜೆ ಡಿ ಪಕ್ಷದ ಮಾಜಿ ಸಂಸದ ಹಾಗು ಕುಖ್ಯಾತ ಕ್ರಿಮಿನಲ್ ಮೊಹಮ್ಮದ್ ಶಹಾಬುದ್ದೀನ್  ೧೧ ವರ್ಷಗಳ ಜೈಲು ವಾಸದ ಬಳಿಕ ಜಾಮೀನು ಪಡೆದು ಬಿಡುಗಡೆಯಾದರು . ಸ್ವಾಭಾವಿಕವಾಗಿ ಅವರ ಹಲವಾರು ಬೆಂಬಲಿಗರು ಅವರನ್ನು ಸ್ವಾಗತಿಸಲು ಜೈಲಿನ ಬಾಗಿಲಿಗೇ ಹೋಗಿದ್ದರು. ಆದರೆ ಈ ಬೆಂಬಲಿಗರ ಪೈಕಿ ಮೊಹಮ್ಮದ್ ಕೈಫ್ ಎಂಬ ಹೆಸರಿನ ಶಾರ್ಪ್ ಶೂಟರ್ ಒಬ್ಬನೂ ಇದ್ದ. ಆದರೆ " ಈ ಶೂಟರ್ ಕೈಫ್ " ಸಾಮಾಜಿಕ ಜಾಲತಾಣಗಳಿಗೆ ತಲುಪುವಾಗ  "ಮಾಜಿ ಕ್ರಿಕೆಟರ್ ಹಾಲಿ ಶಾರ್ಪ್ ಶೂಟರ್ ಮೊಹಮ್ಮದ್ ಕೈಫ್ " ಎಂದು ಬದಲಾಗಿಬಿಟ್ಟಿದ್ದಾನೆ ! 

ಸದ್ಯ ಛತ್ತೀಸ್ ಗಢ ರಣಜಿ ತಂಡದ ನಾಯಕನಾಗಿ ಮುಂದಿನ ಕ್ರಿಕೆಟ್ ಋತುವಿಗೆ ಸಿದ್ಧರಾಗುತ್ತಿರುವ ಕೈಫ್ ಸೋದರನಿಗೆ ಪತ್ರಕರ್ತನೊಬ್ಬ ಕರೆ ಮಾಡಿ " ಏ ಕೈಫ್ ಭಾಯ್ ನೇ ಕ್ಯಾ ಕರ್ ದಿಯಾ ( ಈ ಕೈಫ್ ಭಾಯ್ ಯಾಕೆ ಹೀಗೆ ಮಾಡಿದರು ? ) ಎಂದು ಕೇಳಿದಾಗಲೇ ಪ್ರಕರಣದ ಗಂಭೀರತೆ ಅರಿವಿಗೆ ಬಂತು. ಸಾಲದ್ದಕ್ಕೆ  'ಕ್ರಿಕೆಟರ್ ಮೊಹಮ್ಮದ್ ಕೈಫ್ ಕು ಇನ್ಸಾಫ್ ದೊ ( ಕ್ರಿಕೆಟರ್ ಮೊಹಮ್ಮದ್ ಕೈಫ್ ಗೆ ನ್ಯಾಯ ಕೊಡಿ )' ಎಂಬ ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡಿತು. 

ಈ ಬಗ್ಗೆ ' ಕ್ರಿಕೆಟಿಗ ಕೈಫ್ ' ವಿವರವಾಗಿ ಸ್ಪಷ್ಟೀಕರಣ ನೀಡಿದ ಮೇಲೆ ವಿಷಯ ಸ್ಪಷ್ಟವಾಯಿತು. "ನಾನು ಗನ್ ನಿಂದ ಶೂಟ್ ಮಾಡುವುದಿಲ್ಲ, ಬಾಲ್ ನಿಂದ ಸ್ಟಂಪ್ ಗೆ ಶೂಟ್ ಮಾಡುತ್ತೇನೆ " ಎಂದು ಕೈಫ್ ತಮ್ಮ ಸ್ಪಷ್ಟೀಕರಣದಲ್ಲಿ ಹೇಳಿದ್ದಾರೆ. 

ಅದ್ಭುತ ಫೀಲ್ಡರ್ ಆಗಿರುವ ಕೈಫ್ ಉತ್ತರ ಪ್ರದೇಶದಿಂದ ಭಾರತೀಯ ಟೆಸ್ಟ್ ತಂಡ ಪ್ರತಿನಿಧಿಸಿದ ಪ್ರಪ್ರಥಮ ಆಟಗಾರ.  2000 ದಲ್ಲಿ ಅಂಡರ್ 19 ತಂಡದ ನಾಯಕನಾಗಿ ದೇಶಕ್ಕೆ ವಿಶ್ವ ಕಪ್ ಗೆದ್ದವರು. 2002 ರಲ್ಲಿ ಲಾರ್ಡ್ಸ್ ನಲ್ಲಿ ನಡೆದ  ನ್ಯಾಟ್ ವೆಸ್ಟ್ ಸರಣಿಯ ಫೈನಲ್ ನಲ್ಲಿ ಇಂಗ್ಲೆಂಡ್ ನ ಬೃಹತ್ ಮೊತ್ತವನ್ನು ಎದುರಿಸಿ ತಂಡವನ್ನು ಗೆಲ್ಲಿಸಿದ ಶ್ರೇಯಸ್ಸು ಕೈಫ್ ಅವರದ್ದು. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News