ಹಣ ಇಲ್ಲದ್ದಕ್ಕೆ ಚಿಕಿತ್ಸೆ ನಿರಾಕರಿಸಿದ ವೈದ್ಯರು

Update: 2016-09-21 04:07 GMT

ರಾಯಪುರ, ಸೆ.21: ಹಣವಿಲ್ಲ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನಿರಾಕರಿಸಿದ ಪರಿಣಾಮ, ಮೃತ ಭ್ರೂಣವನ್ನು ಐದು ದಿನಗಳ ಖಾಲ ಒಡಲಲ್ಲೇ ಇಟ್ಟುಕೊಂಡ ಗರ್ಭಿಣಿ, ಸೋಂಕಿನಿಂದ ಮೃತಪಟ್ಟಿರುವ ಅಮಾನವೀಯ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯಲ್ಲಿ ಸಂಭವಿಸಿದೆ.

ಸೋಮವಾರ ಪತಿಯ ಜೊತೆ ಮೂರು ಖಾಸಗಿ ಆಸ್ಪತ್ರೆ ಸುತ್ತಿದರೂ, ರಕ್ತ ಮತ್ತು ಹಣವನ್ನು ಮೊದಲು ಹೊಂದಿಸುವಂತೆ ಆಸ್ಪತ್ರೆಗಳಿಂದ ಉತ್ತರ ದೊರಕಿತು. ಈ ಘಟನೆ ಬೆಳಕಿಗೆ ಬಂದ ಬಳಿಕ ಇದೀಗ ಛತ್ತೀಸ್‌ಗಢ ಮಹಿಳಾ ಆಯೋಗ, ಪ್ರಕರಣದ ಬಗ್ಗೆ ತನಿಖೆಗೆ ಆದೇಶ ನೀಡಿದೆ.

ಗುಲಾಬ್‌ದಾಸ್ ಮಹಾಂತ ಹಾಗೂ ಸರಸ್ವತಿ (22) ದಂಪತಿ ಸ್ಕ್ಯಾನಿಂಗ್‌ಗೆ ಆಗಮಿಸಿದ ವೇಳೆ, ಎಂಟು ತಿಂಗಳ ಭ್ರೂಣ ಮೃತಪಟ್ಟಿರುವುದು ತಿಳಿದುಬಂತು. ಜಮುನಾದೇವಿ ಸ್ಮಾರಕ ಹೆರಿಗೆ ಆಸ್ಪತ್ರೆಯ ವೈದ್ಯರು ಈ ಭ್ರೂಣ ತೆಗೆಸಲು ಸೂಚಿಸಿ, ತಕ್ಷಣ 10 ಸಾವಿರ ರೂಪಾಯಿ ಹಾಗೂ ಮೂರು ಘಟಕ ರಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಮಹಿಳೆ ಅಸಾಧ್ಯ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಹಣ ಹಾಗೂ ರಕ್ತ ಹೊಂದಿಸಲು ದಂಪತಿಗೆ ಸಾಧ್ಯವಾಗಲಿಲ್ಲ. ಆ ಆಸ್ಪತ್ರೆಗೆ ಮತ್ತೆ ಹೋಗಿ ಮನವಿ ಮಾಡಿಕೊಂಡಾಗ, ಶುಲ್ಕವನ್ನು ಮುಂಗಡವಾಗಿಯೇ ಪಾವತಿಸದಿದ್ದರೆ, ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ನಿರಾಕರಿಸಿದರು ಎಂದು ತಿಳಿದುಬಂದಿದೆ. ಈ ಮಧ್ಯೆ ಸೋಂಕು ದೇಹವಿಡೀ ವ್ಯಾಪಿಸಿತ್ತು. ಚಿಂತಾಜನಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೇರೆ ಆಸ್ಪತ್ರೆಗೆ ಹೋಗುವಂತೆ ವೈದ್ಯರು ಸಲಹೆ ಮಾಡಿದರು. ಪಕ್ಕದಲ್ಲಿದ್ದ ಕೃಷ್ಣ ಆಸ್ಪತ್ರೆಗೆ ದಂಪತಿ ತೆರಳಿದರು. ಪರಿಸ್ಥಿತಿ ಬಿಗಡಾಯಿಸಿರುವುದರಿಂದ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಉತ್ತರ ಅಲ್ಲೂ ಬಂತು. ನಂತರ ಸೃಷ್ಟಿ ಆಸ್ಪತ್ರೆಯಲ್ಲಿ ಮಂಗಳವಾರ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿದರು. ಆದರೆ ಆ ರಾತ್ರಿ ಆಕೆ ಮೃತಪಟ್ಟಳು.

"ತುರ್ತು ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಮೊದಲು ಆಕೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ವೈದ್ಯರು ಬಳಿಕ, ಶಸ್ತ್ರಚಿಕಿತ್ಸೆ ಮುಂದೂಡಿದರು. ಇದು ವೈದ್ಯರು ಕಾರ್ಯನಿರ್ವಹಿಸುವ ರೀತಿಯೇ ಎಂದು ಮಹಾಂತ ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News