×
Ad

ಭಾರತದಲ್ಲಿ 29 ಕೋಟಿ ಕುಟುಂಬಗಳಿಗೆ ಭೂಕಂಪ ಸಂತ್ರಸ್ತರಾಗುವ ಅಪಾಯ!

Update: 2016-09-21 08:48 IST

ಹೊಸದಿಲ್ಲಿ, ಸೆ.21: ಭಾರತದ ಒಟ್ಟು ಭೂಪ್ರದೇಶದಲ್ಲಿ ಶೇ.59ರಷ್ಟು ಭಾಗದಲ್ಲಿ ಸಾಮಾನ್ಯ ಅಥವಾ ತೀವ್ರತರ ಭೂಕಂಪ ಸಾಧ್ಯತೆ ಇದೆ ಎನ್ನುತ್ತದೆ ಇತ್ತೀಚೆಗೆ ಬಿಡುಗಡೆಯಾದ ಭೂಕಂಪ ನಕ್ಷೆ. ದೇಶದ ಒಟ್ಟು 30.4 ಕುಟುಂಬಗಳ ಪೈಕಿ 28.8 ಕೋಟಿ ಕುಟುಂಬಗಳು (ಶೇ. 95) ವಿವಿಧ ಪ್ರಮಾಣದ ಭೂಕಂಪದ ಭೀತಿಯ ನೆರಳಲ್ಲೇ ಬದುಕಬೇಕಾಗುತ್ತದೆ.

ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಎಷ್ಟರಮಟ್ಟಿಗೆ ಭೂಕಂಪದ ಅಪಾಯವಿದೆ ಎಂಬ ಮಾಹಿತಿ ನೀಡುವ ಈ ನಕ್ಷೆ ಮುಂದಿನ ಮೂರು ತಿಂಗಳಲ್ಲಿ ನಿಮ್ಮ ಮೊಬೈಲ್‌ನಲ್ಲೇ ಲಭ್ಯ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಹಾಗೂ ನಿರ್ಮಾಣ ಸಾಧನ ಹಾಗೂ ತಂತ್ರಜ್ಞಾನ ಉತ್ತೇಜನ ಮಂಡಳಿ ಜಂಟಿಯಾಗಿ ಇದನ್ನು ಸಿದ್ಧಪಡಿಸಿವೆ.

ತಾಲೂಕು ಮಟ್ಟದವರೆಗೂ ಭೂಕಂಪ ವಲಯದ ಮಾಹಿತಿ ನೀಡಲಾಗಿದೆ. ಈ ನಕ್ಷೆಯನ್ನು ಡಿಜಿಟಲೀಕರಿಸಿ, ಮೊಬೈಲ್ ಆಪ್ ಮೂಲಕ ಪ್ರತಿಯೊಬ್ಬರಿಗೂ ಇದರ ಪ್ರಯೋಜನ ಸಿಗುವಂತೆ ಮಾಡಲು ಉಭಯ ಸಂಸ್ಥೆಗಳು ನಿರ್ಧರಿಸಿವೆ. ಈ ಮಾಹಿತಿ ಲಭ್ಯತೆಯಿಂದಾಗಿ ಯೋಜನಾಗಾರರು, ನಾಗರಿಕರಿಗೆ ಮುನ್ನೆಚ್ಚರಿಕೆ ಹೆಜ್ಜೆಗಳನ್ನು ಇಡಲು ಸಲಹೆ ಮಾಡಬಹುದಾಗಿದೆ ಎಂದು ಬಣ್ಣಗಳ ಮೂಲಕ ಸಂಕೇತ ನೀಡುವ ಈ ನಕ್ಷೆ ಬಿಡುಗಡೆ ಮಾಡಿದ ನಗರ ಗೃಹ ನಿರ್ಮಾಣ ಅಭಿವೃದ್ಧಿ ಖಾತೆ ಸಚಿವ ಎಂ.ವೆಂಕಯ್ಯನಾಯ್ಡು ಹೇಳಿದರು.

ಭೂಕಂಪದ ತೀವ್ರತೆಯ ಸಾಧ್ಯತೆಯನ್ನು ಐದು ವಿಭಿನ್ನ ಬಣ್ಣಗಳಲ್ಲಿ ತಿಳಿಸಲಾಗಿದೆ. ಅಪಾಯಕಾರಿ ಪ್ರದೇಶದ ಗಡಿಗಳನ್ನು ಕೂಡಾ ಇದು ಸೂಚಿಸಿದೆ. ಇದರ ಮಾಹಿತಿಯನ್ನು ಆಧರಿಸಿ ಹೊಸ ಹೊಸ ಕಟ್ಟಡಗಳನ್ನು ನಿರ್ಮಿಸುವುದರಿಂದ ಭೂಕಂಪದ ಪರಿಣಾಮವನ್ನು ಕಡಿಮೆ ಮಾಡಬಹುದಾಗಿದೆ ಎಂದು ರಾಜ್ಯ ಖಾತೆ ಸಚಿವ ರಾವ್ ಇಂದ್ರಜೀತ್ ಸಿಂಗ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News