×
Ad

ಮತ್ತೊಂದು "ಉರಿ ದುರಂತ" ತಪ್ಪಿಸಿದ ಮುಸ್ಲಿಂ ವೃದ್ಧ ದಂಪತಿ

Update: 2016-09-21 10:27 IST

ಜಮ್ಮು, ಸೆ.21: ಜಮ್ಮು ಕಾಶ್ಮೀರದ ಪೂಂಛ್ ಪಟ್ಟಣ ಎಂದಿನಂತೆ ಕಾರ್ಯಾಚರಿಸುತ್ತಿತ್ತು. ಇಲ್ಲಿನ ಅಲ್ಲಾ ಪೀರ್ ಮೊಹಲ್ಲಾ ಪ್ರದೇಶದ ಸುತ್ತ ಸರಕಾರಿ ಕಟ್ಟಡಗಳೇ ಆವರಿಸಿದೆ. ಬ್ರಿಗೇಡ್ ಕೇಂದ್ರ ಕಚೇರಿ, ಎಸ್.ಎಸ್.ಪಿ. ಮತ್ತು ಜಿಲ್ಲಾಧಿಕಾರಿ ಕಛೇರಿ, ಪೊಲೀಸ್ ಠಾಣೆ ಎಲ್ಲವೂ ಈ ಪ್ರದೇಶದಲ್ಲಿದೆ. ಹೀಗಿರುವಾಗ ಸೆಪ್ಟಂಬರ್ 11 ರಂದು ಬೆಳಗ್ಗಿನ ಜಾವ ಇಲ್ಲೊಂದು ಅಹಿತಕರ ಘಟನೆ ಅನಿರೀಕ್ಷಿತ ಎಂಬಂತೆ ನಡೆಯುತ್ತದೆ. "ಉರಿ" ಪ್ರಾಂತ್ಯಕ್ಕಿಂತಲೂ ಘೋರವಾದ ಹಿಂಸೆ, ಹತ್ಯೆ ಸಂಭವಿಸಬಹುದಾದ ಘಟನೆಗೆ ಮುಸ್ಲಿಂ ವೃದ್ಧ ದಂಪತಿಗಳು ಬ್ರೇಕ್ ಹಾಕುತ್ತಾರೆ. ಅದೇನೆಂದು ಕೆಳಗೆ ಓದಿ.

ಅಲ್ಲಾ ಪೀರ್ ಮೊಹಲ್ಲಾ ಪ್ರದೇಶದಲ್ಲಿ  71 ರ ಹರೆಯದ ಹಾಜಿ ನಝೀರ್ ಹುಸೈನ್ ಮೀರ್ ಹಾಗೂ 62 ರ ಹರೆಯದ ಮುಮ್ತಾಝ್ ಮೀರ್ ದಂಪತಿಯು ವಾಸಿಸುತ್ತಿದ್ದ "ಮೀರ್ ಮನ್ ಝಿಲ್" ನಿವಾಸಕ್ಕೆ ಪಾಕಿಸ್ತಾನದ "ಲಷ್ಕರೆ ತಯ್ಬಾ"ದ ಉಗ್ರರು ನುಸುಳುತ್ತಾರೆ. ಮನೆಯನ್ನು ಅಕ್ರಮಿಸುತ್ತಾರೆ. ಮನೆಯ ಅಡುಗೆ ಕೋಣೆಗೆ ತೆರಳಿ ಅಲ್ಲಿ ಕೆಲಸ ಮಾಡುತ್ತಿದ್ದವನಿಗೆ ಗುಂಡು ಹಾರಿಸುತ್ತಾರೆ. ಇದನ್ನರಿತ ವೃದ್ಧ ದಂಪತಿ ಉಗ್ರರ ಕಣ್ಣಿಗೆ ಬೀಳದಂತೆ ಮನೆಯ ಮತ್ತೊಂದು ಮಗ್ಗುಲಲ್ಲಿರುವ ಕೋಣೆ ಸೇರಿ ಚಿಲಕ ಹಾಕುತ್ತಾರೆ. ಫೋನ್ ಮೂಲಕ ಪೊಲೀಸರಿಗೆ ಮತ್ತು ನೆರೆಯವರಿಗೆ ವಿವರ ನೀಡುತ್ತಾರೆ. ನಂತರ ಬಾತ್ ರೂಮ್ ನಲ್ಲಿ ಅಡಗಿ ಕೂರುತ್ತಾರೆ. ಏತನ್ಮಧ್ಯೆ ಮನೆಯನ್ನು ಅಕ್ರಮಿಸಿದ ಪಾಕಿಸ್ತಾನದ ಉಗ್ರರು ಆ ಪ್ರದೇಶದ ಸರಕಾರಿ ಕಚೇರಿಗಳ ದಾಳಿಗೆ ಸಿದ್ಧತೆ ನಡೆಸುತ್ತಾರೆ.

ಉಗ್ರರ ಪ್ರತಿ ಚಲನವಲನಗಳನ್ನೂ ಬಾತ್ ರೂಮಲ್ಲಿ ಅಡಗಿ ಗಮನಿಸುತ್ತಿದ್ದ ವೃದ್ಧ ದಂಪತಿ ಮೌನವಾಗಿ ಆನ್ ಲೈನ್ ಮೂಲಕ ಪೊಲೀಸ್, ಆರ್ಮಿ ಹಾಗೂ ನೆರೆಯವರಿಗೆ ಕ್ಷಣ ಕ್ಷಣದ ಮಾಹಿತಿ ನೀಡುತ್ತಾರೆ. ಮನೆಯ ಸನಿಹದಲ್ಲೇ ಇದ್ದ ಪೊಲೀಸರು ತಕ್ಷಣ ಆಗಮಿಸಿ ಉಗ್ರರ ವಿರುದ್ಧ ದಾಳಿ ನಡೆಸಿದರೂ ಫಲಕಾರಿಯಾಗುವುದಿಲ್ಲ. ಇದರಲ್ಲಿ ಐವರು ಪೊಲೀಸರು ಗಾಯಗೊಳ್ಳುತ್ತಾರೆ. ನಂತರ ಆರ್ಮಿ ಫೋರ್ಸ್ ಮನೆಯನ್ನು, ಆ ಪ್ರದೇಶವನ್ನು ಆವರಿಸುತ್ತದೆ. ಊರ ನಾಗರಿಕರು ಆರ್ಮಿ ಫೋರ್ಸ್ ಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಸೈನಿಕರಿಗೆ ಮನೆ ಮನೆಗಳಲ್ಲಿ ಊಟೋಪಚಾರದ ವ್ಯವಸ್ಥೆ ಮಾಡುತ್ತಾರೆ. ವೃದ್ಧ ದಂಪತಿಯ "ಮೀರ್ ಮನ್ ಝಿಲ್" ನಲ್ಲಿ ದಿನವಿಡೀ ಗುಂಡಿನ ಕಾಳಗ ನಡೆಯುತ್ತದೆ. ಇಬ್ಬರು ಉಗ್ರರು ಹತರಾಗುತ್ತಾರೆ. ಉಳಿದಿಬ್ಬರು ಉಗ್ರರು ಅಲ್ಲಿಂದ ತಪ್ಪಿಸಿಕೊಂಡು ಸೆಕ್ಯುರಿಟಿ ಕಟ್ಟಡದಲ್ಲಿ ಅಡಗುತ್ತಾರೆ. ಬೆಂಬಿಡದ ಆರ್ಮಿ ಪಡೆ ಗುಂಡಿನ ಮಳೆಗೆರೆಯುತ್ತದೆ. ಅಲ್ಲಿದ್ದ ಉಗ್ರರೂ ಸಾಯುತ್ತಾರೆ. ಒಟ್ಟು 60 ತಾಸುಗಳ ಎನ್ ಕೌಂಟರ್ ಆಪರೇಷನ್ ನಲ್ಲಿ "ಲಷ್ಕರೆ ತಯ್ಬಾ" ಸಂಘಟನೆಯ ಎಲ್ಲಾ ನಾಲ್ಕು ತಲೆಗಳೂ ಉರುಳುತ್ತವೆ. ಸೆಪ್ಟಂಬರ್ 13 ರಂದು ಸಂಜೆ ಹೊತ್ತಿಗೆ ಆರ್ಮಿ ಪಡೆ, ಪೊಲೀಸರು ಮತ್ತು ಊರವರು ನಿರಾಳರಾಗುತ್ತಾರೆ.

ಸತ್ತ ಭಯೋತ್ಪಾದಕರನ್ನು ಸೈಫುಲ್ಲಾ, ಉಮರ್, ತಲ್ಲಾ ಮತ್ತು ಮಸೂದ್ ಎಂದು ಗುರುತಿಸಲಾಗುತ್ತದೆ. ಎಲ್ಲರೂ ಲಷ್ಕರೆ ತಯ್ಬಾ ಸಂಘದ ಉಗ್ರರು. ಇವರ ಬಳಿಯಿದ್ದ ನಾಲ್ಕು ಎಕೆ-47 ರೈಫಲ್, ಗ್ರೆನೇಡ್ ಗಳು, ಭೂಪಟಗಳು, ಮೊಬೈಲ್ ಫೋನ್ ಗಳು, 15 ಮ್ಯಾಗಝಿನ್ ಗಳು ಹಾಗೂ ಇನ್ನಿತರ ಸ್ಪೋಟಕ ವಸ್ತುಗಳನ್ನು ಆರ್ಮಿ ಪಡೆ ವಶಪಡಿಸಿಕೊಳ್ಳುತ್ತದೆ. ಬಹುಷಃ ಮುಸ್ಲಿಂ ವೃದ್ಧ ದಂಪತಿಯ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆ ಇಲ್ಲದೇ ಇದ್ದಿದ್ದರೆ "ಊರಿ" ಗಿಂತಲೂ ದೊಡ್ಡ ದುರಂತ ಪೂಂಛ್ ಪ್ರಾಂತ್ಯದಲ್ಲಿ ಸಂಭವಿಸುತ್ತಿತ್ತು. ಹಾಜಿ ನಝೀರ್ ಹುಸೈನ್ ಮೀರ್ ದಂಪತಿಯು ಪ್ರಸಿದ್ಧ ಮನೆತನದವರಾಗಿದ್ದು, ಜಮ್ಮು ಕಾಶ್ಮೀರ ವಿಧಾನಪರಿಷತ್ ನ ಕಾಂಗ್ರೆಸ್ ಪಕ್ಷದ ಸದಸ್ಯ ಜಹಾಂಗೀರ್ ಹುಸೈನ್ ಮೀರ್ ಅವರ ಹತ್ತಿರದ ಸಂಬಂಧಿಯಾಗಿದ್ದಾರೆ. ವೃದ್ಧ ದಂಪತಿಯ ಸಮಯೋಚಿತ ತೀರ್ಮಾನವನ್ನು ಹಾಗೂ ಎದೆಗುಂದದ ಧೈರ್ಯವನ್ನು ಇಡೀ ಜಮ್ಮು ಕಾಶ್ಮೀರವೇ ಕೊಂಡಾಡುತ್ತದೆ.

ಹಾಜಿ ನಝೀರ್ ಹುಸೈನ್ ಮೀರ್ ದಂಪತಿಯ ಮಾನವೀಯ ಸಾಹಸವನ್ನು ಅರಿತ ಉತ್ತರ ಪ್ರಾಂತ್ಯದ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡ ಅವರು ಸೆಪ್ಟಂಬರ್ 15 ರಂದು ಪೂಂಛ್ ಗೆ ಆಗಮಿಸಿ ಪೂಂಛ್ ಎಸ್ಪಿ ಜೆ.ಎಸ್. ಜೋಹರ್ ಉಪಸ್ಥಿತಿಯಲ್ಲಿ ಹಾಜಿ ನಝೀರ್ ಹುಸೈನ್ ದಂಪತಿಯನ್ನು ಗೌರವಾನ್ವಿತ ಆರ್ಮಿ ಪಿನ್ ಮತ್ತು ನಗದು ಬಹುಮಾನ ನೀಡಿ ಸನ್ಮಾನಿಸುತ್ತಾರೆ. ಆದರೆ ಅದರಲ್ಲಿ ಸಿಕ್ಕ ನಗದನ್ನು ನಝೀರ್ ಹುಸೈನ್ ಸೈನಿಕರ ಕಲ್ಯಾಣ ನಿಧಿಗೆ ಹಿಂದಿರುಗಿಸುವ ಮೂಲಕ ಮತ್ತೊಮ್ಮೆ ಮಾನವೀಯತೆ ಮೆರೆಯುತ್ತಾರೆ. ಒಟ್ಟಿನಲ್ಲಿ ಪೂಂಛ್ ಪ್ರದೇಶದಲ್ಲಿ ಶಾಂತಿ ನೆಲೆಸುತ್ತದೆ. ವೃದ್ಧ ದಂಪತಿಯಿಂದಾಗಿ ಉಗ್ರರ ಟಾರ್ಗೆಟ್ ಠುಸ್ ಆಗುತ್ತದೆ. ಹಲವು ಭಾರತೀಯ ಜೀವಗಳು ಉಳಿಯುತ್ತದೆ. ಕಷ್ಟ ನಷ್ಟಗಳು ತಪ್ಪಿವೆ. ಇದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. 

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News