ಸುರತ್ಕಲ್-ಕಾನ-ಎಂಆರ್ ಪಿಎಲ್ ರಸ್ತೆ ಅವ್ಯವಸ್ಥೆ ಖಂಡಿಸಿ ಅಣಕು ಶವಯಾತ್ರೆ

Update: 2016-09-21 07:46 GMT

ಮಂಗಳೂರು, ಸೆ.21: ಸುರತ್ಕಲ್-ಕಾನ-ಎಂಆರ್ ಪಿಎಲ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಯ ಬಗ್ಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಸುರತ್ಕಲ್ ಕಾನದ ನಾಗರಿಕ ಹೋರಾಟ ಸಮಿತಿಯು ವತಿಯಿಂದ ಅಣಕು ಶವಯಾತ್ರೆ ನಡೆಸಿ ಧರಣಿ ನಡೆಸಿತು.

ಕಳೆದ ಮೂರು ಮೂರು ವರ್ಷಗಳಿಂದ ಜನತೆ ರಸ್ತೆ ದುರಸ್ತಿಗಾಗಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದರೂ ಆಡಳಿತದಿಂದ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಆರೋಪಿಸಿದ ಹೋರಾಟ ಸಮಿತಿ ಕಾರ್ಯಕರ್ತರು ಸುರತ್ಕಲ್ ಮಾರುಕಟ್ಟೆ ಮುಂಭಾಗದಿಂದ ನಗರಪಾಲಿಕೆ ಕಚೇರಿ ವರೆಗೆ ಶವಯಾತ್ರೆ ನಡೆಸಿದರು.

ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸ್ಥಳೀಯ ಶಾಸಕ ಮೊಯ್ದಿನ್ ಬಾವ ಎಂಆರ್ ಪಿಎಲ್ ನ ಋಣಕ್ಕೆ ಬಿದ್ದಿದ್ದಾರೆ. ತನ್ನ ವ್ಯಾಪಾರಿ ಹಿತಾಸಕ್ತಿಗಳಿಂದಾಗಿ ಕಂಪೆನಿಗಳ ಕುರಿತು ಮೃದು ಧೋರಣೆ ಹೊಂದಿದ್ದಾರೆ. ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸುತ್ತಾ ಹಾಯಾಗಿದ್ದಾರೆ. ಇಂತಹ  ಶಾಸಕರಿದಾಗಿ ಜನತೆ ಸಂಚಾರಕ್ಕೂ ಪರದಾಡುವಂತಾಗಿದೆ ಎಂದು ವ್ಯಂಗ್ಯವಾಡಿದರು. ತಕ್ಷಣ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಹೋರಾಟ ಸಮಿತಿಯ ಪ್ರಮುಖರಾದ ನವೀನ್ ಪೂಜಾರಿ, ಶ್ರೀನಾಥ್ ಕುಲಾಲ್, ಶ್ರೀನಿವಾಸ್ ಹೊಸಬೆಟ್ಟು, ಮುಹಮ್ಮದ್ ಬಾಳ, ಸಲೀಂ ಕಾಟಿಪಳ್ಳ, ಸಿರಾಜ್ ಕಾಟಿಪಳ್ಳ, ಡಿವೈಎಫ್ಐ ಮುಖಂಡರಾದ ಮಕ್ಸೂದ್ ಕಾನ, ಅಜ್ಮಾಲ್ ಕಾನ, ಮುಸ್ತಫಾ, ನಾಸಿರ್ ಮತ್ತಿತರರು ಹೋರಾಟದ ನೇತೃತ್ವ ವಹಿಸಿದ್ದರು.

ನಾಗರಿಕ ಹೋರಾಟ ಸಮಿತಿ ಸಂಚಾಲಕ ಬಿ ಕೆ ಇಮ್ತಿಯಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News