×
Ad

ಹಳೆಯ ಬಸ್‌ಗಳ ವಿರುದ್ಧ ಕಾನೂನು ಪ್ರಕಾರ ಕ್ರಮ!

Update: 2016-09-21 15:20 IST

ಮಂಗಳೂರು, ಸೆ.21: ನಗರದಲ್ಲಿ ಓಡಾಡುತ್ತಿರುವ ಬಹುತೇಕ ಖಾಸಗಿ ಬಸ್ಸುಗಳು ಜನಸ್ನೇಹಿಯಾಗಿಲ್ಲ, ಇದರಿಂದ ವಾಹನ ದಟ್ಟಣೆಗೂ ಕಾರಣವಾಗುತ್ತಿದೆ ಎಂಬ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಬಂದಿರುವ ಹಿನ್ನೆಲೆಯಲ್ಲಿ ಹಳೆಯ ಬಸ್ಸುಗಳನ್ನು ಕಾನೂನು ಪ್ರಕಾರ ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಎ)ದ ಸಭೆಯಲ್ಲಿ ಸಾರ್ವಜನಿಕರು ಹಾಗೂ ಬಸ್ಸು ಮಾಲಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಖಾಸಗಿ ಬಸ್ಸು ಮಾಲಕರು ಪ್ರಯಾಣಿಕ ಸ್ನೇಹಿಯಾಗಿರದ ಬಸ್ಸುಗಳನ್ನು ಬದಲಾವಣೆ ಮಾಡಿಕೊಳ್ಳಬೇಕು. ಸೂಚನೆಯನ್ನು ಪಾಲಿಸದಿದ್ದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜೆನರ್ಮ್ ಬಸ್‌ಗಳನ್ನು ಸ್ಟೇಟ್ ಬ್ಯಾಂಕ್‌ನಿಂದ ಓಡಿಸಲು ಅವಕಾಶ ನೀಡಿರುವುದರಿಂದಾಗಿ ನಗರದಲ್ಲಿ ಸಂಚಾರ ದಟ್ಟಣೆ ಜಾಸ್ತಿಯಾಗಿದೆ ಎಂದು ಬಸ್ ಮಾಲಕರ ಸಂಘದ ಪ್ರತಿನಿಧಿಗಳು ದೂರಿದರು. ಈ ವಾದವನ್ನು ಅಲ್ಲಗಳೆದ ಜಿಲ್ಲಾಧಿಕಾರಿ, ನಗರದಲ್ಲಿ ಸಂಚರಿಸುತ್ತಿರುವ ಹೆಚ್ಚಿನ ಸಂಖ್ಯೆಯ ಖಾಸಗಿ ಬಸ್‌ಗಳು ಹಳೆಯವು. ಅವು ಪ್ರಯಾಣಿಕ ಸ್ನೇಹಿಯಾಗಿಯೂ ಇಲ್ಲ. ಇದು ನಗರದೊಳಗೆ ಸಂಚಾರದಟ್ಟಣೆ ಹೆಚ್ಚಲು ಪ್ರಮುಖ ಕಾರಣ ಎಂಬ ದೂರುಗಳಿವೆ. ಖಾಸಗಿ ಬಸ್ ಮಾಲಕರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದನ್ನು ನಿಲ್ಲಿಸಬೇಕು. ಸಾರ್ವಜನಿಕರು ಬಯಸುವಂತಹ ಸೇವೆ ನೀಡಿ, ಅವರಿಂದ ಮೆಚ್ಚುಗೆ ಗಳಿಸಬೇಕು. ಅದಕ್ಕೆ ತಕ್ಕಂತೆ ಅಗತ್ಯ ಮಾರ್ಪಾಟುಗಳನ್ನು ಮಾಡಿಕೊಳ್ಳುವಂತೆ ಓರ್ವ ಜಿಲ್ಲಾಧಿಕಾರಿ ನೆಲೆಯಲ್ಲಿ ನಾನಿವತ್ತು ಖಾಸಗಿ ಬಸ್ಸು ಮಾಲಕರಿಗೆ ವಿನಂತಿ ಮಾಡುತ್ತಿದ್ದೇನೆ. ಖಾಸಗಿ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರಿಗೆ ಸೇವಾ ಮನೋಭಾವ ಮೂಡುವ ನಿಟ್ಟಿನಲ್ಲಿ ಮಾಲಕರು ತರಬೇತಿ ನಡೆಸಬೇಕು. ಮುಂದೆಯೂ ಜನರಿಂದ ದೂರುಗಳು ಬರಲಾರಂಭಿಸಿದರೆ, ಸಾರ್ವಜನಿಕರ ಪರವಾಗಿ ತೀಕ್ಷ್ಣವಾದ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಕೆಎಸ್ಸಾರ್ಟಿಸಿಗೂ ಮಾತಿನ ಚಾಟಿ ಬೀಸಿದ ಡಿಸಿ!

ಸರಕಾರಿ ಸ್ವಾಮ್ಯದ ಕೆಎಸ್ಸಾರ್ಟಿಸಿಯಿಂದ ಸಾರ್ವಜನಿಕರಿಗೆ ಸೇವಾ ಮನೋಭಾವ ಹೆಚ್ಚಿನದ್ದಾಗಿರಬೇಕು. ಅದಕ್ಕಾಗಿಯೇ ಜಿಲ್ಲಾಡಳಿತಕ್ಕೆ ಸಾರ್ವಜನಿಕರಿಂದ ಬರುವ ಮನವಿ, ದೂರುಗಳನ್ನು ಕೆಎಸ್ಸಾರ್ಟಿಸಿಗೆ ಕಳುಹಿಸಲಾಗುತ್ತಿದೆ. ಆ ಮನವಿಗೆ ಯಾವ ರೀತಿ ಸ್ಪಂದಿಸುವುದು ಅಥವಾ ತಿರಸ್ಕರಿಸುವ ಕುರಿತಂತೆ ಅಧಿಕಾರಿಗಳು ನನ್ನಲ್ಲಿ ಬಂದು ಮುಕ್ತವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೂ ಮಾತಿನ ಚಾಟಿಯೇಟು ಬೀಸಿದರು.

ನೀತಿ ರೂಪಿಸಲು ಸಲಹೆ

ನಗರ ಪ್ರದೇಶಗಳಲ್ಲಿ ಬಸ್ಸು ಓಡಿಸಲು ಆಸಕ್ತಿ ವಹಿಸುವ ಖಾಸಗಿ ಹಾಗೂ ಕೆಎಸ್ಸಾರ್ಟಿಸಿಯವರು ಗ್ರಾಮಾಂತರ ಪ್ರದೇಶಗಳಲ್ಲಿ ಬಸ್ಸು ಹಾಕುತ್ತಿಲ್ಲ. ಕೆಲವೊಂದು ಪರವಾನಿಗೆ ಪಡೆದ ಬಸ್ಸುಗಳು ಕೂಡಾ ರಾತ್ರಿ 7 ಗಂಟೆಯ ನಂತರ ಕೆಲವು ಕಡೆ ಓಡಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿ ಕೊಣಾಜೆ, ಕೈಕಂಬ, ಗುರುಪುರ, ಮುಲ್ಕಿ, ಚೇಳ್ಯಾರು ಮೊದಲಾದ ಪ್ರದೇಶಗಳ ನಾಗರಿಕರು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸ್ವಂತ ಲಾಭಕ್ಕಿಂತ ಸಾರ್ವಜನಿಕರ ಹಿತಾಸಕ್ತಿ ಖಾಸಗಿ ಮತ್ತು ಕೆಎಸ್ಸಾರ್ಟಿಸಿಗೆ ಪ್ರಮುಖವಾಗಿರಬೇಕು. ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಇರುವ ಪ್ರದೇಶಗಳಲ್ಲಿ ಬಸ್‌ಗಳನ್ನು ಓಡಿಸಲೇಬೇಕು. ನಗರ ಪ್ರದೇಶದಲ್ಲಿ ಬಸ್ ಓಡಿಸಲು ಪಡೆಯುವ ಪರವಾನಿಗೆಗಳ ಅನುಪಾತಕ್ಕೆ ಸಮನಾಗಿ ಗ್ರಾಮೀಣ ಪ್ರದೇಶದಲ್ಲೂ ಬಸ್‌ಗಳನ್ನು ಓಡಿಸುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಾನೂನು ಪ್ರಕಾರ ಅವಕಾಶ ಇದೆಯೇ ಎಂಬುದನ್ನು ಪರಿಶೀಲಿಸಿ ಸ್ಪಷ್ಟ ನೀತಿಯೊಂದನ್ನು ರೂಪಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ. ಜಗದೀಶ್ ಸಲಹೆ ನೀಡಿದರು.

ಕಾನೂನು ವ್ಯಾಪ್ತಿಯಲ್ಲಿ ಇದಕ್ಕೆ ಅವಕಾಶ ಇಲ್ಲವಾದಲ್ಲಿ ಖಾಸಗಿ ಬಸ್ಸು ಮಾಲಕರೇ ಖುದ್ದು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ನೆಲೆಯಲ್ಲಿ ತಾನು ಮನವಿ ಮಾಡುತ್ತಿರುವುದಾಗಿ ಅವರು ಹೇಳಿದರು.

ವಾಹನ ದಟ್ಟಣೆ ಕಡಿಮೆಗೊಳಿಸಲು ಕ್ರಮ

ಸಭೆಯಲ್ಲಿ ಸಾರ್ವಜನಿಕರಿಂದ ವಾಹನ ದಟ್ಟಣೆ ಕುರಿತಂತೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ದಿನೇ ದಿನೇ ಹೆಚ್ಚುತ್ತಿರುವ ವಾಹನಗಳಿಂದಾಗಿ ಸಾರ್ವಜನಿಕರಿಗೆ ರಸ್ತೆಗಳಲ್ಲಿ ನಡೆದಾಟಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಈ ಬಗ್ಗೆ ಜಿಲ್ಲಾಧಿಕಾರಿ, ನಗರದಲ್ಲಿ ವಾಹನ ದಟ್ಟಣೆಗೆೆ ಸಂಬಂಧಿಸಿ ಸಾರ್ವಜನಿಕರು ನೀಡಿರುವ ಸಲಹೆಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಜೆನರ್ಮ್‌ನಡಿ ಬಾಕಿ ಬಸ್ಸುಗಳ ಓಡಾಟ: ಪರಿಶೀಲಿಸಿ ಮುಂದಿನ ಕ್ರಮ

ಜೆನರ್ಮ್ ಯೋಜನೆಯಡಿ ಮಂಗಳೂರಿಗೆ ಮಂಜೂರಾಗಿರುವ 35 ಬಸ್ಸುಗಳಲ್ಲಿ ಬಾಕಿ ಉಳಿದಿರುವ 17 ಬಸ್ಸುಗಳ ಸಂಚಾರ ಪರವಾನಿಗೆ ಕುರಿತಾದ ಅರ್ಜಿಗಳು ಇತ್ಯರ್ಥವಾಗಬೇಕಿದೆ. ಆದರೆ ಈ ಬಗ್ಗೆ ಬಸ್ಸು ಮಾಲಕರ ಸಂಘದ ಪ್ರತಿನಿಧಿಗಳು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದರಿಂದ ಸದ್ಯ ಆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ದಕ್ಷಿಣ ಕನ್ನಡ ಎಸ್‌ಪಿ ಭೂಷಣ್ ಜಿ.ಬೊರಸೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗ್ಡೆ ಮತ್ತು ಪ್ರಾಧಿಕಾರದ ಕಾರ್ಯದರ್ಶಿ ಅನ್ವರ್ ಪಾಷಾ ಸಭೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಯಿಂದ ನೇರ ಮಾತು, ಸ್ಪಷ್ಟ ನಿರ್ದೇಶನ!

ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಆರ್‌ಟಿಎ ಸಭೆ ಸಭೆಯಲ್ಲಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್, ನೇರ ಮಾತು ಹಾಗೂ ಸ್ಪಷ್ಟ ನಿರ್ದೇಶನದ ಮೂಲಕ ಗಮನ ಸಾರ್ವಜನಿಕರ ಸೆಳೆದರು. ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆಗೆ ಸುಮಾರು 15 ನಿಮಿಷ ತಡವಾಗಿ ಜಿಲ್ಲಾಧಿಕಾರಿ ಆಗಮಿಸಿದ ವೇಳೆ ಸಭೆಯಲ್ಲಿ ಸಾರ್ವಜನಿಕರೊಬ್ಬರು ಆಕ್ಷೇಪಿಸುತ್ತಾ, ಜಿಲ್ಲೆಯ ಜನರು ಸಮಯ ಪಾಲನೆಗೆ ಮಹತ್ವ ನೀಡುವವರು. ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಬೇಕೆಂದರು.

ಇದಕ್ಕೆ ನಮ್ರವಾಗಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮುಂದೆ ನಿಗದಿತ ಸಮಯಕ್ಕೆ ಸಭೆ ಆರಂಭಿಸಲಾಗುವುದು. ಜಿಲ್ಲಾಧಿಕಾರಿಯಾಗಿ ಹಲವಾರು ಕೆಲಸ ಕಾರ್ಯಗಳಿರುತ್ತವೆ. ಇಂದಿನ ಸಭೆಯ ಅವಧಿ ಒಂದು ಗಂಟೆಗೆ ನಿಗದಿಪಡಿಸಲಾಗಿದೆ. ಬಳಿಕ ನಾನು ಇನ್ನೊಂದು ಸಭೆಯಲ್ಲಿ ಭಾಗವಹಿಸಬೇಕಿದೆ. ಈ ಸಭೆ ನಿಗದಿತ ಸಮಯದಲ್ಲಿ ಮುಗಿಸಲು ಅವಕಾಶ ನೀಡಿದ್ದಲ್ಲಿ ಆ ಸಭೆಯಲ್ಲಿ ನಿಗದಿತ ಸಮಯದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ನೇರವಾಗಿ ನುಡಿದರು. ಬಳಿಕ ಸುಮಾರು ಒಂದು ಗಂಟೆ 15 ನಿಮಿಷಗಳ ಕಾಲ ಸಾರ್ವಜನಿಕರು, ಬಸ್ಸು ಮಾಲಕರ ದೂರು, ಮನವಿಗಳನ್ನು ಜಿಲ್ಲಾಧಿಕಾರಿ ಆಲಿಸಿದರು.

ಬಳಿಕ ಮಾತನಾಡಿ, ‘‘ಇದು ನನ್ನ ಮೊದಲ ಆರ್‌ಟಿಎ ಸಭೆ. ಈ ಭಾಗದಲ್ಲಿ ಹಿಂದೆ ಕಾರ್ಯ ನಿರ್ವಹಿಸಿದ ಅನುಭವವೂ ನನಗಿಲ್ಲ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿನ ಸಮಸ್ಯೆಗಳೂ ವಿಭಿನ್ನವಾಗಿದೆ. ಹಾಗಾಗಿ ಇಂದು ನಾನು ಯಾವುದೇ ತೀರ್ಮಾನಕ್ಕೆ ಬರಬೇಕಾದರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಂದು ಸಭೆಯಲ್ಲಿ ಬಸ್ಸು ಮಾಲಕರು ಹಾಗೂ ಸಾರ್ವಜನಿಕರಿಂದ ವ್ಯಕ್ತವಾದ ಎಲ್ಲಾ ಅಹವಾಲುಗಳನ್ನು ಪರಿಗಣಿಸಿ, ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಂದೆ ಎರಡು ತಿಂಗಳ ನಂತರ ಸಭೆ ನಡೆಯಲಿದೆ. ಸಭೆಯಲ್ಲಿ ಭಾಗವಹಿಸಲು ಇಚ್ಚಿಸುವವರು, ಒಂದು ತಿಂಗಳ ಮೊದಲು ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗೆ ಲಿಖಿತ ಮನವಿ ಪತ್ರವನ್ನು ನೀಡಿ ಹಿಂಬರಹ ಪಡೆದುಕೊಳ್ಳಬೇಕು. ರೂಟ್ ಬದಲಾವಣೆ ಕುರಿತಾದ ಮನವಿಗಳಿದ್ದಲ್ಲಿ ನಕ್ಷೆಯ ರೂಪದಲ್ಲಿ ರೂಟ್‌ಗಳನ್ನು ಮನವಿಯಲ್ಲಿ ಉಲ್ಲೇಖಿಸಿದರೆ ಅದರ ಇತ್ಯರ್ಥಕ್ಕೆ ಸುಲಭವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು 15 ದಿನಗಳಲ್ಲಿ ಆ ಮನವಿಗಳನ್ನು ಪರಿಶೀಲಿಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಮುಂದಿನ ಸಭೆಯಲ್ಲಿ ಸೂಕ್ತ ಪರಿಹಾರ ಅಥವಾ ಉತ್ತರ ಸಿಗುವ ರೀತಿಯಲ್ಲಿ ಸಭೆ ನಡೆಯಬೇಕು. ಆದ್ದರಿಂದ ಮುಂದಿನ ಸಭೆಯಲ್ಲಿ, ನಿಗದಿತ ಸಮಯದಲ್ಲಿ ಮನವಿ ಸಲ್ಲಿಸಿ ಹಿಂಬರಹ ಪಡೆದ ಸಾರ್ವಜನಿಕರಿಗೆ ಮಾತ್ರ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News