ಮತ್ತೆ ಸುದ್ದಿಯಲ್ಲಿ ಸಚಿವೆ ಪಂಕಜಾ

Update: 2016-09-21 09:56 GMT

208 ಮಂದಿ ಅಪೌಷ್ಟಿಕತೆಗೆ ಬಲಿಯಾದ ಜಿಲ್ಲೆಗೆ ಸಚಿವೆಯ ಭೇಟಿ

ಮುಂಬೈ,ಸೆ.21: ತೀವ್ರ ಅಪೌಷ್ಟಿತೆಯಿಂದಾಗಿ 208 ಮಂದಿಯ ಸರಣಿ ಸಾವು ಸಂಭವಿಸಿದ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಪಂಕಜಾ ಮುಂಢೆ ಈ ವಾರ ಭೇಟಿ ನೀಡಲಿದ್ದು, ಭೇಟಿಗೆ ಮುನ್ನವೇ ವಿವಾದ ಭುಗಿಲೆದ್ದಿದೆ.

ಈ ವರ್ಷ ಆರಂಭದಿಂದೀಚೆಗೆ 208 ಮಂದಿಯನ್ನು ಬಲಿ ಪಡೆದಿರುವ ಅಪೌಷ್ಟಿಕತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಬುಧವಾರ ಸಂಜೆ ಸಚಿವೆ ಜಿಲ್ಲೆಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.

ರಾತ್ರಿ 7 ಅಥವಾ 8 ಗಂಟೆಯ ವೇಳೆಗೆ ಸಚಿವೆ ಕೊಚ್ ಹಾಗೂ ಕಲಂವಾಡಿ ಗ್ರಾಮಗಳಿಗೆ ಭೇಟಿ ನೀಡುವ ನಿರೀಕ್ಷೆ ಇದ್ದು, ಗ್ರಾಮಗಳ ಒಂದು ಕಿಲೋಮೀಟರ್ ಸುತ್ತ, ಜಿಲ್ಲಾಧಿಕಾರಿ ಅಭಿಜಿತ್ ಬಂಗಾರ್ ಭಾರತೀಯ ಅಪರಾಧ ದಂಡಸಂಹಿತೆಯ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ಸೆಕ್ಷನ್ ಅನ್ವಯ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು ನಿಷಿದ್ಧ. ಶ್ರಮಜೀವಿ ಸಂಘಟನೆಯು ಸಚಿವೆ ಭೇಟಿ ವೇಳೆ ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬುಡಕಟ್ಟು ಅಭಿವೃದ್ಧಿ ಖಾತೆ ಸಚಿವ ವಿಷ್ಣು ಸಾವರ, ಸೆಪ್ಟೆಂಬರ್ 15ರಂದು ಮೃತಮಕ್ಕಳ ಪೋಷಕರನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಈ ಸಂದರ್ಭ ಸ್ವಯಂಸೇವಾ ಸಂಸ್ಥೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಈ ಕ್ರಮ ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶ ಸಮರ್ಥಿಸಿಕೊಂಡಿದೆ.

ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಅವರು, ಜಿಲ್ಲಾಧಿಕಾರಿಗಳ ಕ್ರಮವನ್ನು ಟೀಕಿಸಿದ್ದು, ಸಚಿವೆಗೆ ಬುಡಕಟ್ಟು ಗ್ರಾಮಕ್ಕೆ ಭೇಟಿ ನೀಡಲು ಹೆದರಿಕೆಯಾಗುವುದಾದರೆ, ಆಕೆ ಪ್ರವಾಸವನ್ನು ರದ್ದುಮಾಡುವುದು ಮಾತ್ರವಲ್ಲದೇ ಸಂಪುಟದಿಂದಲೂ ನಿರ್ಗಮಿಸಲಿ ಎಂದು ಆಗ್ರಹಿಸಿದ್ದಾರೆ.

ಆದರೆ ಇಂಥ ಕ್ರಮ ಕೈಗೊಳ್ಳುವಂತೆ ಸೂಚಿಸಿರಲಿಲ್ಲ ಎಂದು ಮುಂಢೆ ಸ್ಪಷ್ಟಪಡಿಸಿದ್ದಾರೆ. ನಿಷೇಧಾಜ್ಞೆ ವಿಧಿಸುವುದಕ್ಕೆ ನನ್ನ ಸಮ್ಮತಿ ಇಲ್ಲ ಎಂದು ಜಿಲ್ಲಾಧಿಕಾರಿಗೆ ಸ್ಪಷ್ಟಪಡಿಸಿದ್ದೇನೆ. ಸಂಘಟನೆಯ ನಿಯೋಗವನ್ನು ನಾನು ಭೇಟಿ ಮಾಡುತ್ತೇನೆ ಎಂದು ಮುಂಢೆ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News