ಪಡಿತರ ಕೂಪನ್ ಅವ್ಯವಸ್ಥೆ ಕುರಿತು ತಾ.ಪಂ. ಸದಸ್ಯರ ಆಕ್ರೋಶ
ಮಂಗಳೂರು, ಸೆ.21: ಪಡಿತರ ಚೀಟಿಯಲ್ಲಿ ರೇಶನ್ ಪಡೆಯಲು ಕೂಪನ್ ವ್ಯವಸ್ಥೆ ಪ್ರಾರಂಭವಾದ ನಂತರ ನ್ಯಾಯಬೆಲೆ ಅಂಗಡಿಯವರು ಜನರನ್ನು ಮತ್ತು ಜನಪ್ರತಿನಿಧಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಇಂದು ನಡೆದ ಮಂಗಳೂರು ತಾ.ಪಂ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಮಂಗಳೂರು ತಾ.ಪಂ ಅಧ್ಯಕ್ಷ ಮುಹಮ್ಮದ್ ಮೋನು ಅವರ ಅಧ್ಯಕ್ಷತೆಯಲ್ಲಿ ನಡೆದ ಮಂಗಳೂರು ತಾ.ಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಬಿಪಿಎಲ್ ಕಾರ್ಡ್‌ದಾರರಿಗೆ ಇನ್ನು ಕೂಪನ್ ಪದ್ದತಿಯನ್ನು ತಾಲೂಕಿನ ಮೂರು ಗ್ರಾಮಪಂಚಾಯತ್ ವ್ಯಾಪ್ತಿ ಹೊರತುಪಡಿಸಿ ಜಾರಿಗೊಳಿಸಲಾಗಿಲ್ಲವಾದರೂ ನ್ಯಾಯಬೆಲೆ ಅಂಗಡಿಯವರು ಜನರನ್ನು ಪಂಚಾಯತ್ ಮತ್ತು ನ್ಯಾಯಬೆಲೆ ಅಂಗಡಿಗಳ ನಡುವೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ಬಿಪಿಎಲ್ ಕಾರ್ಡ್‌ದಾರರಿಗೆ ಕೂಪನ್ ವ್ಯವಸ್ಥೆ ಇಲ್ಲದಿದ್ದರೂ ಕೂಪನ್ ತರುವಂತೆ ಹೇಳುತ್ತಿದ್ದಾರೆ. ಜನಪ್ರತಿನಿಧಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಯಿತು. ಎಪಿಎಲ್ ಕಾರ್ಡ್‌ದಾರರಿಗೆ ಕೂಪನ್ ಪಡೆಯಲು ರೂ. 5ನ್ನು ಪಂಚಾಯತ್ ನಲ್ಲಿ ಸಂಗ್ರಹ ಮಾಡುತ್ತಿರುವ ಬಗ್ಗೆಯೂ ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ 1 ತಾರೀಖಿನಿಂದ 31 ತಾರೀಖಿನವರೆಗೂ ಸರಕಾರಿ ರಜಾ ದಿನ ಮತ್ತು ಮಂಗಳವಾರ ಹೊರತುಪಡಿಸಿ ಪಡಿತರವನ್ನು ನೀಡಬೇಕು. ಈ ಬಗ್ಗೆ ಸೂಚನೆ ನೀಡಲು ಆಗ್ರಹಿಸಲಾಯಿತು.
ಗ್ರಾಮ ಪಂಚಾಯತ್‌ಗಳಲ್ಲಿ ಆಧಾರ್ ಕೇಂದ್ರವನ್ನು ಸ್ಥಾಪಿಸಲು ಆಗ್ರಹ
ಪಡಿತರ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಬೇಕಾದ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿರುವ ಜನರಿಗೆ ಆಧಾರ್ ಕಾರ್ಡ್ ಮಾಡಲು ಸಮಸ್ಯೆಯಾಗಿದೆ. ವೃದ್ದರಿಗೆ , ಅಶಕ್ತರಿಗೆ ಆಧಾರ್ ಕಾರ್ಡ್ ಮಾಡಲು ಆಧಾರ್ ಕೇಂದ್ರದಲ್ಲಿಗೆ ಬರಲು ಅನಾನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮಪಂಚಾಯತ್‌ಗಳಲ್ಲಿ ಆಧಾರ್ ಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ತಾ.ಪಂ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಆಧಾರ್ ಮೊಬೈಲ್ ಕಿಟ್ ಪ್ರತಿ ಗ್ರಾಮಪಂಚಾಯತ್‌ಗೂ ಹೋಗಿ ಆಧಾರ್ ಕಾರ್ಡ್ ಮಾಡುವ ಕೆಲಸ ಮಾಡಲಿದೆ ಎಂದು ಉತ್ತರಿಸಿದರು.
ಸಿಬ್ಬಂದಿಯ ಉದ್ದಟತನಕ್ಕೆ ಕ್ಷಮೆಯಾಚಿಸಿದ ತಹಶೀಲ್ದಾರ್
ಮಂಗಳೂರು ತಾ.ಪಂ.ನಲ್ಲಿ ಸಾರ್ವಜನಿಕರೊಂದಿಗೆ ಸಿಬ್ಬಂದಿ ಉದ್ದಟತನದಿಂದ ವರ್ತಿಸುತ್ತಿದ್ದು ತನಗೂ ಇದೇ ರೀತಿಯ ಅನುಭವವಾಗಿದೆ ಎಂದು ತಾ.ಪಂ. ಸದಸ್ಯರೊಬ್ಬರು ಆಪಾದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಮಹಾದೇವ, ಅವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಮತ್ತು ಸಿಬ್ಬಂದಿ ಈವರೆಗೆ ಮಾಡಿದ ಈ ವರ್ತನೆಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.