×
Ad

ಬೆಳ್ತಂಗಡಿ: ಸ್ಥಳ ಪರಿಶೀಲನೆಗೆ ತೆರಳಿದ ಕಂದಾಯ ನಿರೀಕ್ಷಕರ ಮೇಲೆ ಹಲ್ಲೆ

Update: 2016-09-21 16:13 IST

ಬೆಳ್ತಂಗಡಿ, ಸೆ.21: ಜಮೀನಿನ ವಿವಾದವೊಂದಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆಗೆ ತೆರಳಿದ್ದ ಬೆಳ್ತಂಗಡಿಯ ಕಂದಾಯ ನಿರೀಕ್ಷಕರ ಮೇಲೆ ವ್ಯಕ್ತಿಯೋರ್ವ ತಹಶೀಲ್ದಾರ್ ಎದುರೇ ಹಲ್ಲೆ ನಡೆಸಿದ ಘಟನೆ ಮಾಲಾಡಿ ಗ್ರಾಮದ ಪಾಲ್ದೊಟ್ಟು ಎಂಬಲ್ಲಿ ಮಂಗಳವಾರ ನಡೆದಿದೆ.

ಬೆಳ್ತಂಗಡಿಯ ಕಂದಾಯ ನಿರೀಕ್ಷಕ ರವಿಕುಮಾರ್ ಹಲ್ಲೆಗೊಳಗಾದ ಅಧಿಕಾರಿ. ಇಲ್ಲಿನ ರಾಮಣ್ಣ ಶೆಟ್ಟಿ ಮತ್ತು ಅವರ ಮಗ ಗುರುಪ್ರಸಾದ್ ಶೆಟ್ಟಿ ನಡುವೆ ಜಮೀನು ಮತ್ತು ವಾಸದ ಮನೆಯ ವಿವಾದವೊಂದಿತ್ತು. ತನ್ನ ಮನೆಯನ್ನು ಮಗ ಗುರುಪ್ರಸಾದ್ ಶೆಟ್ಟಿ ಅತಿಕ್ರಮಿಕೊಂಡಿದ್ದು ಅದನ್ನು ತೆರವುಗೊಳಿಸಿಕೊಡಬೇಕೆಂದು ರಾಮಣ್ಣ ಶೆಟ್ಟಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇತ್ತೀಚೆಗಷ್ಟೇ ನ್ಯಾಯಲಯ ರಾಮಣ್ಣ ಶೆಟ್ಟಿ ಪರ ತೀರ್ಪನ್ನು ನೀಡಿತ್ತು. ಇದರಿಂದ ರೊಚ್ಚಿಗೆದ್ದ ಗುರುಪ್ರಸಾದ್ ಶೆಟ್ಟಿ ಮನೆಯ ಕಿಟಕಿ , ಬಾಗಿಲುಗಳನ್ನು ತೆರವು ಮಾಡಿದಲ್ಲದೆ, ಮನೆಗೆ ಹೋಗುವ ದಾರಿಯಲ್ಲಿ ಕಂಪೌಂಡು ನಿರ್ಮಾಣ ಮಾಡಿದ್ದ ಎನ್ನಲಾಗಿದೆ.

ಈ ಬಗ್ಗೆ ಪುತ್ತೂರು ಎಸಿ ಡಾ.ರಾಜೇಂದ್ರರಿಗೆ ರಾಮಣ್ಣ ಶೆಟ್ಟಿ ದೂರು ನೀಡಿದ್ದು, ಅದರಂತೆ ದಾರಿಗೆ ಅಡ್ಡಲಾಗಿ ಕಟ್ಟಲಾಗಿದ್ದ ತಡೆಗೋಡೆಯನ್ನು ತೆರವುಗೊಳಿಸಲು ತಹಶೀಲ್ದಾರ್ ತಿಪ್ಪೆಸ್ವಾಮಿ, ಕಂದಾಯ ನಿರೀಕ್ಷಕ ರವಿ ಕುಮಾರ್, ಗ್ರಾಮಕರಣಿಕ ಸಪ್ನಾಝ್ ಜೊತೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕುಪಿತಗೊಂಡ ಗುರುಪ್ರಸಾದ್ ಶೆಟ್ಟಿ ತಹಶೀಲ್ದಾರ್ ಮೇಲೆ ಪುಂಜಾಲಕಟ್ಟೆ ಪೊಲೀಸರ ಎದುರಿನಲ್ಲಿಯೇ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ತಕ್ಷಣ ಆರೋಪಿಯನ್ನು ಬಂಧಿಸಿದ ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಕೇಸ್ ದಾಖಲಿಸಿದ್ದು, ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದಾಗ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಗುರುಪ್ರಸಾದ್ ಶೆಟ್ಟಿಯನ್ನು ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News