ಕಾವೇರಿ ವಿಚಾರಣೆ: ಸುಪ್ರೀಂ ಕೋರ್ಟ್‌ನಲ್ಲಿ ಸಚಿವ ಪಾಟಿಲ್ ನೀಡಿದ ಉತ್ತರ ಹೇಗಿತ್ತು?
ಕಾವೇರಿ ವಿಚಾರಣೆ: ಸುಪ್ರೀಂ ಕೋರ್ಟ್‌ನಲ್ಲಿ ಭಾವೋದ್ವೇಗಗೊಂಡ ಪಾಟೀಲ್
ಹೊಸದಿಲ್ಲಿ, ಸೆ.21: ಕಾವೇರಿಯ ಕುರಿತಾದ ಭಾವೋದ್ವೇಗ ಕೇವಲ ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಮಾತ್ರ ತೀವ್ರವಾಗಿರುವುದಲ್ಲ. ಅದು ವಾಸ್ತವ ಯುದ್ಧ ರಂಗವಾದ ಸುಪ್ರೀಂಕೋರ್ಟಲ್ಲೂ ಅಷ್ಟೇ ತೀವ್ರವಾಗಿತ್ತೆಂಬುದು ನಿನ್ನೆಯ ವಿಚಾರಣೆಯ ವೇಳೆ ರುಜುವಾತಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿದ್ದ ಪತ್ರಕರ್ತರ ಪ್ರಕಾರ ಅತ್ಯಂತ ಭಾವೋದ್ರೇಕದ ಹೋರಾಟ ಮಾಡಿದವರು ಕರ್ನಾಟಕದ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಎಂದು 'ದಿ ನ್ಯೂಸ್ ಮಿನಿಟ್.ಕಾಂ' ವರದಿ ಮಾಡಿದೆ.
ಪಾಟೀಲರು ಸುಪ್ರೀಂ ಕೋರ್ಟ್‌ನಲ್ಲಿ, ಹೇಗೆ ತುದಿಗಾಲಲ್ಲಿ ನಿಂತಿದ್ದರೆಂಬುದನ್ನು ತಮಿಳು ಸುದ್ದಿವಾಹಿನಿಯೊಂದಕ್ಕಾಗಿ ಕೆಲಸ ಮಾಡುತ್ತಿರುವ ದಿಲ್ಲಿ ಮೂಲದ ಪತ್ರಕರ್ತರೊಬ್ಬರು ವಿವರಿಸಿದ್ದಾರೆ. ಸ್ಥಳಕ್ಕಾಗಿ ಪೇಚಾಡುತ್ತ, ವಾದಗಳನ್ನು ಹಾಗೂ ಅಂಕಿ-ಅಂಶಗಳನ್ನು ವಕೀಲರ ಕಿವಿಯಲ್ಲಿ ಪಿಸುಗುಟ್ಟುತ್ತ, ಮಾಹಿತಿಯ ಚೀಟಿಗಳನ್ನು ಕಳುಹಿಸುತ್ತ, ಸರಿಯಾದ ವ್ಯಕ್ತಿಗೇ ಅದು ತಲುಪಿದೆಯೆಂಬುದನ್ನು ಖಾತ್ರಿಪಡಿಸುತ್ತ ಹಾಗೂ ಮೂರ್ತಿಗಳು ವಾದವನ್ನು ಕೇಳುತ್ತಿದ್ದಾರೆಂದು ಖಚಿತಪಡಿಸಿಕೊಳ್ಳುತ್ತ ಅವರು ಉದ್ವಿಗ್ನತೆಯಿಂದ ಚಡಪಡಿಸುತ್ತಿದ್ದರು.
ಒಂದು ಹಂತದಲ್ಲಿ ಆವೇಶಕ್ಕೊಳಗಾದವರಂತೆ ಪಾಟೀಲ್, ನ್ಯಾಯಮೂರ್ತಿ ಎತ್ತಿದ ಪ್ರಶ್ನೆಗೆ ಉತ್ತರವನ್ನು ಗಟ್ಟಿಯಾಗಿ ಹೇಳಿದ್ದರು.
ಸಂದರ್ಶಕರ ಸಾಲಿನಲ್ಲಿದ್ದ ಸಚಿವರು, ನ್ಯಾಯಮೂರ್ತಿಗಳು ಪ್ರಶ್ನೆ ಕೇಳಿದಾಗೆಲ್ಲ ರಾಜ್ಯದ ವಕೀಲರಿಗೆ ಹೇಗೆ ಉತ್ತರಗಳನ್ನು ದಾಟಿಸುತ್ತಿದ್ದರೆಂಬುದನ್ನು ‘ತಂತಿ ಟಿವಿ’ಯ ಪತ್ರಕರ್ತ ಅರವಿಂದ ಗುಣಶೇಖರ್ ಫೇಸ್‌ಬುಕ್‌ನಲ್ಲಿ ಈ ಕೆಳಗಿನಂತೆ ವಿವರಿಸಿದ್ದಾರೆ.
‘ಒಬ್ಬ ರಾಜಕಾರಣಿ ತನ್ನ ಹುದ್ದೆಗೆ ಇಷ್ಟೊಂದು ನಿಷ್ಠನಾಗಿರುವುದನ್ನು ನಾನು ಬಹಳ ಕಾಲದ ಬಳಿಕ ನೋಡಿದೆ’.
ಕಾವೇರಿ ವಿವಾದದ ವಿಚಾರಣೆಯ ವೇಳೆ ಕರ್ನಾಟಕದ ನೀರಾವರಿ ಸಚಿವ ಎಂ.ಬಿ. ಪಾಟೀಲ್, ರಾಜ್ಯದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ರೊಂದಿಗೆ ಸುಪ್ರೀಂಕೋರ್ಟ್‌ನಲ್ಲಿ ಹಾಜರಿದ್ದರು. ಅವರು ಕರ್ನಾಟಕದ ಪತ್ರಕರ್ತರೊಂದಿಗೆ ಸಂದರ್ಶಕರ ಸಾಲಿನಲ್ಲಿ ನಿಂತುಕೊಂಡಿದ್ದರು. ವಿಚಾರಣೆಯುದ್ದಕ್ಕೂ ಅವರು ತುದಿಗಾಲಲ್ಲೇ ನಿಂತಿದ್ದರು. ಆಗಾಗ ಪಾಟೀಲ್ ಹತ್ತಿರವಿದ್ದ ಪತ್ರಕರ್ತನಿಂದ ಕಾಗದ ಹಾಗೂ ಪೆನ್ ತೆಗೆದುಕೊಂಡು ಅಂಕಿ-ಅಂಶ ಉತ್ತರಗಳನ್ನೊಳಗೊಂಡ ಚೀಟಿಯನ್ನು ತನ್ನ ವಕೀಲರಿಗೆ ಕಳುಹಿಸುತ್ತಿದ್ದರು. ಕರ್ನಾಟಕದ ವಕೀಲರಿಗೆ ನ್ಯಾಯಮೂರ್ತಿಗಳು ಪ್ರಶ್ನೆಗಳನ್ನು ಕೇಳಿದಾಗೆಲ್ಲ ಅವರು ಉತ್ತರವನ್ನು ಪಿಸುಗಟ್ಟುತ್ತಿದ್ದರು. ಒಂದು ಹಂತದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಪಾಟೀಲ್, ಉತ್ತರವನ್ನು ಗಟ್ಟಿಯಾಗಿಯೇ ಉಚ್ಚರಿಸಿದ್ದರು. ವಿಚಾರಣೆಗೆ ಹಾಜರಾಗಿ, ಇಡೀ ದಿನ ನ್ಯಾಯಾಲಯದಲ್ಲಿ ನಿಲ್ಲುವುದು ಅವರಿಗೆ ಅಗತ್ಯವಿರಲಿಲ್ಲ. ಆದರೆ, ಪಾಟೀಲರು ಮಾಡಿದ್ದರು. ಅದು ಕರ್ನಾಟಕಕ್ಕಾಗಿ ಅವರ ನಿಷ್ಠೆ ಹಾಗೂ ಒಳಗೊಳ್ಳುವಿಕೆಯನ್ನು ತೋರಿಸಿದೆಯೆಂದು ಅರವಿಂದ ವಿವರಿಸಿದ್ದಾರೆ.