ಭಾರತದ ಶೇ.95 ಮನೆಗಳಿಗೆ ಭೂಕಂಪ ಭೀತಿ: ವರದಿ
ಹೊಸದಿಲ್ಲಿ, ಸೆ.21: ದೇಶದಲ್ಲಿ ಸುಮಾರು ಶೇ.95ರಷ್ಟು ಮನೆಗಳು ವಿವಿಧ ಮಟ್ಟಗಳಲ್ಲಿ ಭೂಕಂಪಗಳಿಗೆ ತುತ್ತಾಗುವ ಸಾಧ್ಯತೆಯಿದೆಯೆಂದು ಸೂಕ್ತ ಕಟ್ಟಡ ತಂತ್ರಜ್ಞಾನವನ್ನು ಉತ್ತೇಜಿಸುವ ಸರಕಾರಿ ಪ್ರಾಯೋಜಿತ ಸಂಸ್ಥೆ ನಿರ್ಮಾಣ ಸಲಕರಣೆ ತಂತ್ರಜ್ಞಾನ ಉತ್ತೇಜನ ಸಮಿತಿ(ಬಿಎಂಪಿಟಿಸಿ) ತನ್ನ ವರದಿಯೊಂದರಲ್ಲಿ ತಿಳಿಸಿದೆ.
‘ಭೂಕಂಪ ಅಪಾಯ ವಲಯ ನಕ್ಷೆ’ ವರದಿಯನ್ನು ಬಿಎಂಪಿಟಿಸಿ ಕಾರ್ಯಕಾರಿ ನಿರ್ದೇಶಕ ಶೈಲೇಶ್ ಅಗರ್ವಾಲ್ ಹೊಸದಿಲ್ಲಿಯಲ್ಲಿ ಹಂಚಿಕೊಂಡಿದ್ದಾರೆ.
ತಹಸೀಲು ಮಟ್ಟದ ವಿವರ ಹಾಗೂ ಭೂಕಂಪ ತೀವ್ರತೆಯ 5 ವಿವಿಧ ವಲಯಗಳ ಸ್ಥಳಗಳನ್ನು ಗುರುತಿಸಿದ ಬಣ್ಣಗಳ ಸಂಜ್ಞೆಯ ಭೂಪಟಗಳನ್ನು ಗೃಹ ನಿರ್ಮಾಣ ಹಾಗೂ ನಗರ ಬಡತನ ನಿರ್ಮೂಲನ ಸಚಿವ ಎಂ. ವೆಂಕಯ್ಯ ನಾಯ್ಡು ಬಿಡುಗಡೆಗೊಳಿಸಿದರೆಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ದೇಶದ 30.4 ಕೋಟಿ ಮನೆಗಳಲ್ಲಿ ಶೇ.95ರಷ್ಟು ಮನೆಗಳು ವಿವಿಧ ಮಟ್ಟಗಳ ಭೂಕಂಪಗಳಿಗೆ ಸಿಲುಕುವ ಸಾಧ್ಯತೆ ಅಧಿಕವಿದೆಯೆಂದು ಅಗರ್ವಾಲ್ ತಿಳಿಸಿದ್ದಾರೆ.
ಸರ್ವೇ ಆಫ್ ಇಂಡಿಯಾ, ಜಿಯಾಲಜಿಕಲ್ ಸವೇರ್ರ್ ಆಫ್ ಇಂಡಿಯಾ, ಹವಾಮಾನ ಇಲಾಖೆ ಹಾಗೂ ಭಾರತದ ಜನಗಣತಿಗಳಿಂದ ಲಭ್ಯವಾದ ಮಾಹಿತಿಯನ್ನು ಉಪಯೋಗಿಸಿ, ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರಬಂಧನ ಪ್ರಾಧಿಕಾರದ ಪರವಾಗಿ(ಎನ್‌ಡಿಎಂಎ) ಬಿಎಂಪಿಟಿಸಿ ಈ ನಕ್ಷೆಯನ್ನು ತಯಾರಿಸಿದೆ.