×
Ad

ನ್ಯಾಯಾಲಯದ ನಿರ್ಧಾರ ಅತಿಕ್ರಮಿಸುವ ಧೈರ್ಯವನ್ನು ಸರಕಾರ ತೋರಲಿ: ಪೇಜಾವರಶ್ರೀ

Update: 2016-09-21 20:50 IST

ಉಡುಪಿ, ಸೆ.21: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ನಿನ್ನೆ ನೀಡಿದ ಆದೇಶವನ್ನು ಅತಿಕ್ರಮಿಸುವ ಧೈರ್ಯವನ್ನು ರಾಜ್ಯ ಸರಕಾರ ಮಾಡಬೇಕು ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಸಲಹೆ ನೀಡಿದ್ದಾರೆ.

ಶ್ರೀಕೃಷ್ಣ ಮಠದ ಬಡಗು ಮಳಿಗೆಯಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಪತನಕ್ಕೂ ಸಿದ್ಧವಾಗಿರಬೇಕು ಎಂದರು. ನ್ಯಾಯಾಲಯ ರಾಜ್ಯದ ಪರಿಸ್ಥಿತಿಯನ್ನು ಪರಿಗಣಿಸದೇ, ಇಲ್ಲಿನ ನದಿಗಳ ನೀರಿನ ಮಟ್ಟವನ್ನು ಪರಿಶೀಲಿಸದೇ ನೀಡಿದ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ವಿರೋಧಿಸಿ ಅಧಿಕಾರ ತ್ಯಾಗಕ್ಕೂ ಸಿದ್ಧವಾಗಿರಬೇಕು ಎಂದರು.

ರಾಜ್ಯಕ್ಕೆ ಬೇರೆ ಮಾರ್ಗವೇ ಇಲ್ಲವಾಗಿದೆ.ಹೀಗಾಗಿ ಕಾನೂನು ದೃಷ್ಟಿಯಿಂದ ಆದೇಶ ಉಲ್ಲಂಘನೆಗೆ ಸರಕಾರ ಸಿದ್ಧವಿರಬೇಕು. ಆದರೆ ರಾಜ್ಯಲ್ಲಿರುವ ತಮಿಳರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದೂ ಅವರು ಕನ್ನಡಿಗರಿಗೆ ಮನವಿ ಮಾಡಿದರು.

ಏನೇ ಆದರೂ ಹೋರಾಟ ಮಾತ್ರ ಅಹಿಂಸಾತ್ಮಕವಾಗಿರಬೇಕು.ಶಾಂತಿಯುತ ಪ್ರತಿಭಟನೆ ನಡೆಸಬೇಕು. ತಮಿಳರ ವಿರುದ್ಧ ಹಿಂಸೆಗೆ ಇಳಿಯಬಾರದು ಎಂದ ಅವರು, ರಾಜ್ಯ ಸರಕಾರ ಮುಂದಿನ ನಡೆಯನ್ನು ಎಚ್ಚರಿಕೆಯಿಂದ, ವಿಪಕ್ಷವೂ ಸೇರಿದಂತೆ ಎಲ್ಲರೊಂದಿಗೆ ಸಮಾಲೋಚಿಸಿ ಇಡಬೇಕು ಎಂದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಾರದಂತೆ ಸಮಸ್ಯೆಯನ್ನು ನಿಭಾಯಿ ಬೇಕು. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗಬಹುದು. ಅದೇ ರೀತಿ ಈ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶದಿಂದಲೂ ಪ್ರಯೋಜನವಾಗಲಿಕ್ಕಿಲ್ಲ. ಕೇಂದ್ರ ಸರಕಾರಕ್ಕೂ ಉಭಯಸಂಕಟವಿದೆ. ಜಯಲಲಿತಾ ಯಾರ ಮಾತನ್ನೂ ಕೇಳುವುದಿಲ್ಲ. ಅಲ್ಲಿರುವುದು ಪ್ರಾದೇಶಿಕ ಪಕ್ಷ ಎಂದು ಸ್ವಾಮೀಜಿ ತಿಳಿಸಿದರು.

ಈ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಗಳ ನಾಯಕರುಗಳು ಸೇರಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ ಪೇಜಾವರ ಶ್ರೀ, ರಾಜ್ಯದಲ್ಲಿ ಗಂಭೀರ ಸ್ಥಿತಿ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News