ರಾಜೇಶ್ವರಿಗೆ ಪೊಲೀಸ್ ಕಸ್ಟಡಿ ನೀಡದಂತೆ ಹೈಕೋರ್ಟ್ ಆದೇಶ
ಉಡುಪಿ, ಸೆ.21: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಒಂದನೆ ಆರೋಪಿ ರಾಜೇಶ್ವರಿ ಶೆಟ್ಟಿಯನ್ನು ಪೊಲೀಸ್ ಕಸ್ಟಡಿಗೆ ನೀಡಬಾರದೆಂದು ರಾಜ್ಯ ಹೈಕೋರ್ಟ್ ಬುಧವಾರ ಉಡುಪಿಯ ನ್ಯಾಯಾಲಯಕ್ಕೆ ಆದೇಶ ನೀಡಿದೆ.
ಈಗಾಗಲೇ ಅ.3ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಪ್ರಕರಣದ ಒಂದನೆ ಆರೋಪಿ ರಾಜೇಶ್ವರಿ ಶೆಟ್ಟಿಯನ್ನು ನಾಲ್ಕು ದಿನಗಳ ಕಾಲ ಸಿಐಡಿ ಪೊಲೀಸರ ಕಸ್ಟಡಿಗೆ ನೀಡುವಂತೆ ಸೆ.20ರಂದು ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಸಿಐಡಿ ಪರವಾಗಿ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇಂದು ಅದರ ವಿಚಾರಣೆ ಸಂದರ್ಭ ಆರೋಪಿ ಪರ ವಕೀಲ ಅರುಣ್ ಬಂಗೇರ ಬೆಳುವಾಯಿ, ಒಂದನೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಬಾರದೆಂದು ಹೈಕೋರ್ಟ್ ಆದೇಶ ನೀಡಿದೆ ಎಂದು ಜ್ಞಾಪನ ಪತ್ರವನ್ನು ನ್ಯಾಯಾಧೀಶ ರಾಜೇಶ್ ಕರ್ಣಂ ಮುಂದೆ ಸಲ್ಲಿಸಿದರು. ಹೈಕೋರ್ಟ್ ಆದೇಶದ ಪ್ರತಿಯನ್ನು ಸೆ.24ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆರೋಪಿ ಪರ ವಕೀಲರಿಗೆ ಸೂಚಿಸಿದರು.
ನಂತರ ಆ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು. ‘ಪ್ರಕರಣದ ಆರೋಪಿ ರಾಜೇಶ್ವರಿ ಶೆಟ್ಟಿಯನ್ನು ಪೊಲೀಸ್ ಕಸ್ಟಡಿಗೆ ನೀಡ ಬಾರದೆಂದು ವಾರದ ಹಿಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ 15ದಿನಗಳ ಒಳಗೆ ಪೊಲೀಸ್ ಕಸ್ಟಡಿಗೆ ನೀಡಬಹುದೇ ಹೊರತು ಅದರ ನಂತರ ಕೊಡಲು ಅವಕಾಶ ಇಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈಗಾಗಲೇ ಪೊಲೀಸರು ರಾಜೇಶ್ವರಿ ಶೆಟ್ಟಿಯನ್ನು ಎಂಟು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು.
ಇದೀಗ ಒಂದೂವರೆ ತಿಂಗಳ ನಂತರವೂ ಪೊಲೀಸ್ ಕಸ್ಟಡಿಗೆ ಕೇಳುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಇಂದು ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಆನಂದಬೈರ ರೆಡ್ಡಿ, ಪ್ರಕರಣದ ಒಂದನೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಬಾರದು. ಅವಶ್ಯಕತೆ ಇದ್ದರೆ ನ್ಯಾಯಾಂಗ ಬಂಧನಕ್ಕೆ ನೀಡಬಹುದಾಗಿ ಉಡುಪಿ ನ್ಯಾಯಾಲಯಕ್ಕೆ ಆದೇಶ ನೀಡಿದ್ದಾರೆ’ ಎಂದು ಆರೋಪಿ ಪರ ಹೈಕೋರ್ಟ್‌ನಲ್ಲಿ ವಾದಿಸಿದ ನ್ಯಾಯವಾದಿ ಅರುಣ್ ಶ್ಯಾಮ್ ಪತ್ರಿಕೆಗೆ ತಿಳಿಸಿದ್ದಾರೆ.