ನವನೀತ್, ನಿರಂಜನ್ ಭಟ್‌ಗೆ ನ್ಯಾಯಾಂಗ ಬಂಧನ
ಉಡುಪಿ, ಸೆ.21: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್‌ನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡ ಬೇಕೆಂಬ ಸಿಐಡಿ ಅರ್ಜಿಯನ್ನು ತಿರಸ್ಕರಿಸಿದ ಉಡುಪಿ ನ್ಯಾಯಾಲಯ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಕಳೆದ ಆರು ದಿನಗಳಿಂದ ಸಿಐಡಿ ಕಸ್ಟಡಿಯಲ್ಲಿದ್ದ ನಿರಂಜನ್ ಭಟ್‌ನನ್ನು ಮತ್ತು ಎರಡು ದಿನಗಳಿಂದ ಸಿಐಡಿ ಪೊಲೀಸರ ಕಸ್ಟಡಿಯಲ್ಲಿದ್ದ ನವನೀತ್ ಶೆಟ್ಟಿಯನ್ನು ಪೊಲೀಸರು ಇಂದು ಸಂಜೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಮತ್ತೆ ಇವರಿಬ್ಬರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಎಸ್‌ಎಪಿಪಿ ಪ್ರವೀಣ್ ಕುಮಾರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಇದಕ್ಕೆ ನವನೀತ್ ಶೆಟ್ಟಿ ಪರ ವಕೀಲ ಅರುಣ್ ಬಂಗೇರ ಆಕ್ಷೇಪ ವ್ಯಕ್ತಪಡಿಸಿದರು.
ಈ ಬಗ್ಗೆ ಪರಿಶೀಲಿಸಿದ ನ್ಯಾಯಾಧೀಶ ರಾಜೇಶ್ ಕರ್ಣಂ ಅಭಿಯೋಜಕ ಅರ್ಜಿಯನ್ನು ತಿರಸ್ಕರಿಸಿ, ಆರೋಪಿಗಳನ್ನು ಅ.3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ಬಳಿಕ ಇವರನ್ನು ಪೊಲೀಸ್ ಭದ್ರತೆಯಲ್ಲಿ ಮಂಗಳೂರು ಜೈಲಿಗೆ ಕರೆದೊಯ್ಯಲಾಯಿತು.
ಅಲೆವೂರು ಹೊಳೆಯಲ್ಲಿ ರಾಡ್ ಪತ್ತೆ
ಎರಡು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದ ಪ್ರಕರಣದ ಆರೋಪಿ ನವನೀತ್ ಶೆಟ್ಟಿಯನ್ನು ಇಂದು ಕೂಡ ಪೊಲೀಸರು ಸಾಕ್ಷ ಸಂಗ್ರಹಿಸುವ ನಿಟ್ಟಿ ನಲ್ಲಿ ತೀವ್ರ ವಿಚಾರಣೆ ಒಳಪಡಿಸಿದರು.
ಕೃತ್ಯಕ್ಕೆ ಬಳಸಿದ ರಾಡ್‌ನ್ನು ನವನೀತ್ ಅಲೆವೂರು- ದೆಂದೂರುಕಟ್ಟೆ ಮಧ್ಯೆ ಇರುವ ಸೇತುವೆಯ ಕೆಳಗಿರುವ ಹೊಳೆಯಲ್ಲಿ ಎಸೆದಿದ್ದ ಎಂಬ ಮಾಹಿತಿ ಯಂತೆ ಇಂದು ಮಧ್ಯಾಹ್ನ ಆತನನ್ನು ಸ್ಥಳಕ್ಕೆ ಕರೆದೊಯ್ದ ಸಿಐಡಿ ಪೊಲೀಸರು, ಮಂಗಳೂರಿನ ಮುಳುಗು ತಜ್ಞರಿಂದ ರಾಡ್‌ಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಪತ್ತೆಯಾದ ರಾಡ್‌ನ್ನು ಸಿಐಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಸಿಐಡಿ ಎಸ್ಪಿ ಎಡಾ ಮಾರ್ಟಿನ್, ತನಿಖಾಧಿಕಾರಿ ಚಂದ್ರಶೇಖರ್ ಹಾಜರಿದ್ದರು.