×
Ad

‘ದಲಿತರಿಗೆ ಮೀಸಲಿಟ್ಟ ಎಲ್ಲ ಸೌಲಭ್ಯಗಳನ್ನು ನೀಡಿ’

Update: 2016-09-21 23:53 IST

ಉಡುಪಿ, ಸೆ.21: ‘‘ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಫಲಕಗಳನ್ನು ಹಾಕಿ. ನಮಗೆ ಭೂಮಿ ಕೊಡಿ, ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಿ’’ ಎಂದು ಜಿಲ್ಲೆಯ ದಲಿತ ಪರ ಸಂಘಟನೆಗಳ ಮುಖಂಡರು ಇಂದು ಜಿಲ್ಲಾಡಳಿತ ವನ್ನು ಒಕ್ಕೊರಲಿನಿಂದ ಆಗ್ರಹಿಸಿದರು.
 ಮಣಿಪಾಲದ ಜಿಲ್ಲಾಡಳಿತ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಹಾಗೂ ಕುಂದುಕೊರತೆ ಸಭೆಯಲ್ಲಿ ಈ ಒತ್ತಾಯ ಕೇಳಿಬಂತು. ದಲಿತರು ದೂರು ದಾಖಲಿಸಲು ಬಂದ ವೇಳೆ ಪೊಲೀಸ್ ಠಾಣೆಯಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ದೂರು ನೀಡಿದ ವೇಳೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳ ತನಿಖೆ ನಡೆಸಬೇಕು. ಕೋಟೆಬಾಗಿಲಿನಲ್ಲಿ ಪರಿಶಿಷ್ಟ ಜಾತಿ-ಪಂಗಡದ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಉಳಿದ ಬಗ್ಗೆ, ಮೀನು ಕಟ್ಟಿಂಗ್ ಕಾರ್ಖಾನೆ ಆರಂಭವಾದರೆ ಹಂಗಾರಕಟ್ಟೆ ಬಾಳಕುದ್ರು ಶಾಲಾ ಮಕ್ಕಳಿಗೆ ಆಗುವ ತೊಂದರೆಗಳ ಬಗ್ಗೆ, ಜಿಲ್ಲೆಯ ಅಪರೂಪದ ಕಲಾ ಪ್ರಕಾರವಾದ ಕೋಲು ಹುಯ್ಯುವ ಪದದ ಹಿರಿಯ ಕಲಾವಿದರಿಗೆ ಮಾಸಾಶನ ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡರು ಜಿಲ್ಲಾಧಿಕಾರಿಯ ಗಮನ ಸೆಳೆದರು.
ಈ ಎಲ್ಲ ಮನವಿಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ, ಸಮಯ ಮಿತಿಯೊಳಗೆ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ಭರವಸೆ ನೀಡಿದರು. ಕೊಲ್ಲೂರು ಸಮೀಪದ ಮುಧೂರು ಸರ್ವೇ ನಂಬರ್ 163 ಜಾಗವನ್ನು ಮತ್ತೊಮ್ಮ ಸರ್ವೇ ಮಾಡಲು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಮರಳುಗಾರಿಕೆಯ ಬಗ್ಗೆ ನ್ಯಾಯಾಲಯದ ತೀರ್ಪು ಬಂದ ನಂತರ ತಾವು ಯಾವುದೇ ನಿರ್ಣಯ ತೆಗೆದುಕೊಳ್ಳುವುದಾಗಿ ಟಿ.ವೆಂಕಟೇಶ್ ಮರಳು ಪರವಾನಿಗೆ ಕುರಿತ ಚರ್ಚೆಗೆ ಉತ್ತರಿ ಸಿದರು. ಡಿಸಿ ಮನ್ನಾ ಜಾಗದ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಶೀಘ್ರವೇ ಕಾನೂನು ಮಾಹಿತಿ ನೀಡಲು ದಿನ ನಿಗದಿಪಡಿಸಲು ಜಿಲ್ಲಾಧಿಕಾರಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಶೇ.24.10ರ ಅನುದಾನ ಬಳಕೆ ಕುರಿತು ಸವಿವರ ಮಾಹಿತಿ ನೀಡಲು ಉಡುಪಿ ಮತ್ತು ಕುಂದಾಪುರ ಕಾರ್ಯನಿರ್ವಹ ಣಾಧಿಕಾರಿಗಳಿಗೆ ಸೂಚಿಸಿದ ವೆಂಕಟೇಶ್, ಜಿಲ್ಲೆಯಲ್ಲಿರುವ ಅಂಬೇಡ್ಕರ್ ಭವನಗಳ ಕುರಿತು ಮಾಹಿತಿ ನೀಡಿ ಎಂದೂ ನಿರ್ದೇಶಿಸಿದರು. ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ದೇವರಗುಡ್ಡೆ ಕಾಲನಿಗೆ ನೀರು ಪೂರೈಸಲು ಟ್ಯಾಂಕ್ ದುರಸ್ತಿ ಮಾಡಿಸುವಂತೆಯೂ ಅವರು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ, ಬನ್ನಂಜೆ ಹಾಸ್ಟೆಲ್ ಸಮಸ್ಯೆ, ಮೊವ್ವಾಡಿಯಲ್ಲಿ ಗೋಮಾಲ ತೆರವುಗೊಳಿಸುವ ಸಮಸ್ಯೆ, ವಂಡಾರು ಗ್ರಾಮದಲ್ಲಿ ಭೂಮಿ ಹಕ್ಕು ಸಮಸ್ಯೆ, ಹಿರಿಯಡ್ಕ ಮುತ್ತೂರಿನಲ್ಲಿ ಬಾವಿ ಕುಸಿದ ಸಮಸ್ಯೆ, ಶಿರಿಯಾರ ಗ್ರಾಪಂನಲ್ಲಿ ಚುನಾಯಿತ ಅಧ್ಯಕ್ಷರಿಗೆ ಕಾರ್ಯನಿರ್ವಹಣೆಗೆ ಅಡ್ಡಿ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಭೆಯ ಗಮನ ಸೆಳೆದ ಮುಖಂಡರಿಗೆ ಸಮಸ್ಯೆ ಪರಿಹರಿಸುವ ಬಗ್ಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭರವಸೆ ನೀಡಿದರು.
 ಜಿಪಂ ಸದಸ್ಯೆ ಚಂದ್ರಿಕಾ, ಸುಂದರ ಮಾಸ್ಟರ್, ವಾಸುದೇವ ಮುದೂರು, ಮಂಜುನಾಥ ಗಿಳಿಯಾರ್, ಗಣೇಶ್ ಕೊರಗ, ಮಹಾಬಲ, ಉದಯ ಕುಮಾರ್ ತಲ್ಲೂರು ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಮಾತನಾಡಿದರು. ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲಕೃಷ್ಣ ವೇದಿಕೆಯಲ್ಲಿದ್ದರು. ಸಮಾಜ ಕಲ್ಯಾಣಾಧಿಕಾರಿ ಎನ್.ಎಸ್.ರಮೇಶ್ ಕುಮಾರ್ ಸಭೆಯನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News