×
Ad

ಮಣಿಪಾಲದ ಹಸೀನಾ ಅಬ್ದುಲ್ಲಾಗೆ ಅಂತಾರಾಷ್ಟ್ರೀಯ ಟ್ರಾನ್ಸಾಕ್ಷನಲ್ ಅನಾಲಿಸಿಸ್ ಪ್ರಮಾಣಪತ್ರ

Update: 2016-09-22 09:26 IST

ಮಣಿಪಾಲ, ಸೆ.22: ಪರ್ಕಳ ಕೆ.ಅಬ್ದುಲ್ಲಾ ಅವರ ಪುತ್ರಿ ಹಸೀನಾ ಅಬ್ದುಲ್ಲಾ ತಮ್ಮ ಟ್ರಾನ್ಸಾಕ್ಷನಲ್ ಅನಾಲಿಸಿಸ್ (ಮನೋಭಾವ ವಿಶ್ಲೇಷಣೆ) ಸೈಕೊಥೆರಪಿಯ ಅಂತಾರಾಷ್ಟ್ರೀಯ ಪ್ರಮಾಣಪತ್ರ ಪಡೆದಿದ್ದಾರೆ. ಈ ಸಾಧನೆ ಮಾಡಿರುವ ಭಾರತೀಯರು ತೀರಾ ವಿರಳ. ಇಂಟರ್‌ನ್ಯಾಷನಲ್ ಟ್ರಾನ್ಸಾಕ್ಷನಲ್ ಅನಾಲಿಸಿಸ್ ಅಸೋಶಿಯೇಶನ್, ಇವರಿಗೆ ಈ ಪ್ರಮಾಣಪತ್ರ ನೀಡಿದೆ. ದಕ್ಷಿಣ ಏಷ್ಯಾ ಟ್ರಾನ್ಸಾಕ್ಷನಲ್ ಅನಾಲಿಸಿಸ್ ಆಯೋಜಿಸಿದ್ದ ಸಮ್ಮೇಳನದಲ್ಲಿ 2016ರ ಸೆಪ್ಟೆಂಬರ್ 1ರಂದು ಈ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಸೈಕೊಥೆರಪಿ ಕ್ಷೇತ್ರದ ಸಾಧ್ಯತೆಗಳನ್ನು ಸಂಶೋಧಿಸುವಲ್ಲಿ ಹಸೀನಾ ಮಾಡಿದ ಎಂಟು ವರ್ಷಗಳ ನಿರಂತರ ಪ್ರಯತ್ನವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಹಸೀನಾ ಅವರಿಗೆ ಸಂಬಂಧದ ಚೌಕಟ್ಟು ಹಾಗೂ ಸಬಲೀಕರಣ ಪ್ರಯತ್ನದ ಬಗ್ಗೆ ಸಂಶೋಧನೆ ನಡೆಸುವಲ್ಲಿ ವಿಶೇಷ ಒಲವು. ಮಾನವ ನಡವಳಿಕೆಯ ಆಳವಾದ ಅಧ್ಯಯನ ಅವರನ್ನು ಮನೋಭಾವ ವಿಶ್ಲೇಷಣೆ (ಟ್ರಾನ್ಸಾಕ್ಷನಲ್ ಅನಾಲಿಸಿಸ್) ಜಗತ್ತಿನ ಜ್ಞಾನದತ್ತ ಆಕರ್ಷಿಸಿತು. ಅದರಲ್ಲೂ ಮುಸ್ಲಿಂ ಮಹಿಳೆಯೊಬ್ಬರು ಈ ಹಾದಿಯಲ್ಲಿ ಕ್ರಮಿಸಿದ್ದು ವಿರಳಾತಿವಿರಳ. ಇವರು ಇಡೀ ವಿಶ್ವದಲ್ಲೇ ಎರಡನೆ ಮುಸ್ಲಿಮ್ ಮಹಿಳಾ ಮನೋಭಾವ ವಿಶ್ಲೇಷಕಿ (ಟ್ರಾನ್ಸಾಕ್ಷನಲ್ ಅನಾಲಿಸ್ಟ್) ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ವಿಶ್ವದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಮನೋಭಾವ ವಿಶ್ಲೇಷಕರು ಪಾಲ್ಗೊಂಡಿದ್ದ ಈ ಸಮ್ಮೇಳನದಲ್ಲಿ ಪರೀಕ್ಷಕರಾಗಿ, ಜರ್ಮನಿ, ಇಂಗ್ಲೆಂಡ್, ಜಪಾನ್, ದಕ್ಷಿಣ ಆಫ್ರಿಕಾ, ಅಮೆರಿಕ ಹಾಗೂ ಭಾರತದ ತಜ್ಞರು ಭಾಗವಹಿಸಿದ್ದರು. ಹಸೀನಾ ಮನಃಶಾಸ್ತ್ರ ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಇವರು ಹಿಪ್ನೋಥೆರಪಿ, ಗೆಸ್ಟಾಲ್ಟ್ ಥೆರಪಿ (ಆಕೃತಿ ಚಿಕಿತ್ಸೆ), ಸೈಕೊಡ್ರಾಮಾದಲ್ಲೂ ತರಬೇತಿ ಪಡೆದಿದ್ದಾರೆ. ಎನ್‌ಎಲ್‌ಪಿಯಲ್ಲಿ ಮಾಸ್ಟರ್ ಪ್ರಾಕ್ಟಿಷನರ್ ಆಗಿರುವ ಹಸೀನಾ, ಅಮೆರಿಕದ ಡಾ.ರಿಚರ್ಡ್ ಮೆಕ್ ಹಘ್‌ರಿಂದ ತರಬೇತಿ ಪಡೆದಿದ್ದಾರೆ. ಪ್ರಸ್ತುತ ಮಣಿಪಾಲದಲ್ಲಿರುವ ತಮ್ಮ ‘ಸಾಝ್’ ಕ್ಲಿನಿಕ್‌ನಲ್ಲಿ ಹಾಗೂ ಕೇರಳದ ಕಲ್ಲಿಕೋಟೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮನೋಭಾವ ವಿಶ್ಲೇಷಣೆ (ಟಿಎ) ಎನ್ನುವುದು ಮನಃಶಾಸ್ತ್ರೀಯ ಕ್ಷೇತ್ರದ ಇತ್ತೀಚಿನ ಜ್ಞಾನಶಾಖೆಯಾಗಿದ್ದು, ಇದು ಜಾಗೃತಿ ಮೂಡಿಸುವ ಹಾಗೂ ಗುಣಪಡಿಸುವ ಸಾಮರ್ಥ್ಯದ ಮೂಲಕ ರೋಗಿಗಳ ಸಬಲೀಕರಣಕ್ಕೆ ಕಾರಣವಾಗುತ್ತದೆ. ಇದು ವ್ಯಕ್ತಿತ್ವದ ಪ್ರಬಲ ಸಿದ್ಧಾಂತವಾಗಿದ್ದು, ವೈಯಕ್ತಿಕ ಪ್ರಗತಿ ಹಾಗೂ ಬದಲಾವಣೆಗಳಿಗೆ ವ್ಯವಸ್ಥಿತ ಮನಃಶಾಸ್ತ್ರೀಯ ಚಿಕಿತ್ಸಾ ಸಾಧನವಾಗಿದೆ. ಇದು ಪರಸ್ಪರ ಒಪ್ಪಿಗೆಯ ಪ್ರಬಲ, ಪುರಾವೆ ಆಧರಿತ, ಪರಿಣಾಮಕಾರಿ ರೋಗ ಪತ್ತೆ ಹಾಗೂ ಚಿಕಿತ್ಸಾ ಯೋಜನೆಯಾಗಿದೆ. ಮನಃಶಾಸ್ತ್ರಜ್ಞರ ಸಲಹೆ ಪಡೆಯುವುದೇ ಈ ಸಮಾಜದಲ್ಲಿ ಕಳಂಕ ಎನಿಸಿದ್ದು, ಅಂಥವರಿಗೆ ಮನೋವಿಕೃತ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಕೆಲವೊಮ್ಮೆ ವೈದ್ಯರು ಕೂಡಾ ಇಂಥ ದುರದೃಷ್ಟಕರ ಪರಿಸ್ಥಿತಿಗೆ ಕಾರಣರಾಗುತ್ತಾರೆ. ಈ ಗುಣಪಡಿಸುವ ಪ್ರಕ್ರಿಯೆಯಲ್ಲಿ, ನಮ್ಮ ವ್ಯಕ್ತಿತ್ವದ ಅಜ್ಞಾತ ಭಾಗವನ್ನು ಸಂಶೋಧಿಸುವುದು ಮುಖ್ಯವಾಗಿದೆ. ಮನೋಭಾವ ವಿಶ್ಲೇಷಣಾ ಚಿಕಿತ್ಸಕರು ಈ ವಿಧಾನದಲ್ಲಿ, ರೋಗಿಗಳಿಗೆ ಮನೋವಿಕೃತ ಎಂಬ ಹಣೆಪಟ್ಟಿ ಕಟ್ಟುವ ಬದಲು, ಗರಿಷ್ಠ ಗೌರವ ಹಾಗೂ ಸ್ವೀಕಾರಾರ್ಹತೆಯೊಂದಿಗೆ ಕಕ್ಷಿದಾರರು ತಮ್ಮ ವ್ಯಕ್ತಿತ್ವದ ಅಜ್ಞಾತ ಭಾಗವನ್ನು ಸಂಶೋಧಿಸಿಕೊಳ್ಳುವಂತೆ ಮಾಡುತ್ತಾರೆ.
ಮನೋಭಾವ ವಿಶ್ಲೇಷಣೆಯ ಪರಿಕಲ್ಪನೆಯನ್ನು, ಇದಕ್ಕೆ ತೆರೆದುಕೊಂಡ ಕ್ಷಣದಿಂದಲೇ ನಮ್ಮ ಜೀವನದಲ್ಲೂ ಅನ್ವಯಿಸಿಕೊಳ್ಳಬಹುದಾಗಿದೆ. ರೋಗಿಯಲ್ಲೇ ರೋಗಕ್ಕೆ ಚಿಕಿತ್ಸೆ ನೀಡುವ ಮತ್ತು ಗುಣಪಡಿಸುವ ಶಕ್ತಿ ಇದೆ ಎನ್ನುವುದು ಈ ಸಿದ್ಧಾಂತದ ನಂಬಿಕೆ. ಈ ಚಿಕಿತ್ಸಕರು ಇಲ್ಲಿ ರೋಗಿಗೆ ಯೋಚಿಸಿ, ನಿರ್ಧಾರ ತೆಗೆದುಕೊಳ್ಳಲು ಅಗತ್ಯ ಸೌಲಭ್ಯವನ್ನು ಕಲ್ಪಿಸಿಕೊಡುತ್ತಾರೆ. ಮನೋಭಾವ ವಿಶ್ಲೇಷಣೆಯ ಅನ್ವಯಿಕೆಯು, ಸಾಂಸ್ಥಿಕ ಯಶಸ್ಸು ಹಾಗೂ ಶೈಕ್ಷಣಿಕ ಶ್ರೇಷ್ಠತೆ ಸಾಧಿಸಲೂ ಸಹಕಾರಿಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News