×
Ad

ಭಾರತದ ಕ್ರಿಕೆಟ್ ತಂಡದ ಐವರು ಆಯ್ಕೆಗಾರರು ಆಡಿದ್ದು ಒಟ್ಟು 13 ಟೆಸ್ಟ್, 31 ಏಕದಿನ ಮಾತ್ರ!

Update: 2016-09-22 10:24 IST

ಮುಂಬೈ, ಸೆ.22: ಭಾರತ ಕ್ರಿಕೆಟ್ ತಂಡದ ನೂತನ ಆಯ್ಕೆ ಸಮಿತಿಗೆ ಆಯ್ಕೆಯಾಗಿರುವ ಐವರು ಸದಸ್ಯರು ಒಟ್ಟು 13 ಟೆಸ್ಟ್ ಹಾಗೂ 31 ಏಕದಿನ ಪಂದ್ಯಗಳನ್ನಷ್ಟೇ ಆಡಿದ ಅನುಭವಿಗಳಾಗಿದ್ದಾರೆ.

ಆಯ್ಕೆ ಸಮಿತಿಯ ನಿರ್ಗಮನ ಅಧ್ಯಕ್ಷ ಸಂದೀಪ್ ಪಾಟೀಲ್ 29 ಟೆಸ್ಟ್ ಹಾಗೂ 45 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿದ ಅನುಭವಿ ಆಗಿದ್ದರು. ನೂತನ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಮಾಜಿ ವಿಕೆಟ್‌ಕೀಪರ್ ಎಂಎಸ್‌ಕೆ ಪ್ರಸಾದ್ ಕೇವಲ 6 ಟೆಸ್ಟ್, 17 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಆಯ್ಕೆ ಸಮಿತಿಯಲ್ಲಿರುವ ಇತರ ಸದಸ್ಯರಾದ ದೇವಾಂಗ್ ಗಾಂಧಿ(4 ಟೆಸ್ಟ್, 3 ಏಕದಿನ), ಸರಣ್‌ದೀಪ್ ಸಿಂಗ್(3 ಟೆಸ್ಟ್, 5 ಏಕದಿನ), ಗಗನ್ ಖೋಡ(2 ಏಕದಿನ) ಹಾಗೂ ಜತಿನ್ ಪರಾಂಜಪೆ(4 ಏಕದಿನ) ಕೆಲವೇ ಪಂದ್ಯ ಆಡಿದ್ದಾರೆ.

ಆಯ್ಕೆ ಸಮಿತಿಯಲ್ಲಿರುವ ಸದಸ್ಯರು ಸೀಮಿತ ಟೆಸ್ಟ್ ಪಂದ್ಯ ಆಡಿರುವ ಅನುಭವ ಹೊಂದಿರಬೇಕು ಎಂದು ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟ ಲೋಧಾ ಸಮಿತಿ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಈ ಹೆಜ್ಜೆ ಇಟ್ಟಿದೆ. ಆದರೆ, ಕೆಲವೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಆಯ್ಕೆಗಾರರಿಂದ ದಕ್ಷ ಕಾರ್ಯನಿರ್ವಹಣೆೆ ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

 ಪ್ರಸಾದ್ ಹಾಗೂ ಖೋಡಾಗೆ ನಿರ್ಗಮನ ಆಯ್ಕೆ ಸಮಿತಿಯಲ್ಲಿ ಕೆಲಸ ಮಾಡಿರುವ ಅನುಭವವಿದೆ. ಆದರೆ, ಮೂವರು ತೀರಾ ಹೊಸಬರು. ಇವರುಗಳು ನಾಯಕರಾದ ಧೋನಿ, ವಿರಾಟ್ ಕೊಹ್ಲಿ, ಕೋಚ್ ಅನಿಲ್ ಕುಂಬ್ಳೆ ಅವರೊಂದಿಗೆ ಕಾರ್ಯನಿರ್ವಹಿಸುತ್ತಾರೆ ಎಂದು ಕಾದು ನೋಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News