ಕಾನ್ಪುರದಲ್ಲಿ ಐತಿಹಾಸಿಕ 500ನೆ ಟೆಸ್ಟ್: ಭಾರತದ ಮಾಜಿ ನಾಯಕರಿಗೆ ಗೌರವ
ಕಾನ್ಪುರ, ಸೆ.22: ಭಾರತ ಹಾಗೂ ನ್ಯೂಝಿಲೆಂಡ್‌ನ ನಡುವೆ ಗುರುವಾರ ಐತಿಹಾಸಿಕ 500ನೆ ಟೆಸ್ಟ್ ಪಂದ್ಯ ಆರಂಭವಾಗುವ ಮೊದಲು ಭಾರತದ ಪ್ರಮುಖ ಮಾಜಿ ನಾಯಕರುಗಳನ್ನು ಬಿಸಿಸಿಐ ಸನ್ಮಾನಿಸಿತು.
ಉತ್ತರಪ್ರದೇಶ ರಾಜ್ಯಪಾಲ ರಾಮನಾಯ್ಕ ಅವರು ಮಾಜಿ ನಾಯಕರುಗಳಾದ ಅಜಿತ್ ವಾಡೇಕರ್, ಕಪಿಲ್‌ದೇವ್, ಸುನಿಲ್ ಗವಾಸ್ಕರ್, ದಿಲಿಪ್ ವೆಂಗ್‌ಸರ್ಕಾರ್, ಕ್ರಿಸ್ ಶ್ರೀಕಾಂತ್, ರವಿ ಶಾಸ್ತ್ರಿ, ಮುಹಮ್ಮದ್ ಅಝರುದ್ದೀನ್, ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ, ಅನಿಲ್ ಕುಂಬ್ಳೆ , ಎಂಎಸ್ ಧೋನಿ ಹಾಗೂ ಹಾಲಿ ನಾಯಕ ವಿರಾಟ್ ಕೊಹ್ಲಿಗೆ ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಆದರೆ, ಕನ್ನಡಿಗ,ಮಾಜಿ ನಾಯಕ ಜಿಆರ್ ವಿಶ್ವನಾಥ್‌ರನ್ನು ಕಡೆಗಣಿಸಿದೆ.
ಸನ್ಮಾನ ಕಾರ್ಯಕ್ರಮದಲ್ಲಿ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಹಾಗೂ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಉಪಸ್ಥಿತರಿದ್ದರು.
ಭಾರತ 1932ರಲ್ಲಿ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್‌ನ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿತ್ತು. ಸಿಕೆ ನಾಯ್ಡುರಿಂದ ಆರಂಭಿಸಿ ವಿರಾಟ್ ಕೊಹ್ಲಿ ತನಕ ಭಾರತ ಕ್ರಿಕೆಟ್ ತಂಡವನ್ನು 32 ಮಂದಿ ನಾಯಕರು ಮುನ್ನಡೆಸಿದ್ದಾರೆ. ಇಂಗ್ಲೆಂಡ್(976), ಆಸ್ಟ್ರೇಲಿಯ(791) ಹಾಗೂ ವೆಸ್ಟ್‌ಇಂಡೀಸ್(517) ಟೆಸ್ಟ್‌ನಲ್ಲಿ 500ಕ್ಕೂ ಅಧಿಕ ಪಂದ್ಯಗಳನ್ನು ಆಡಿವೆ.