ಅಂಬೇಡ್ಕರ್ ಭವನ ನಿರ್ಮಾಣ: ದಲಿತರ ಹೋರಾಟಕ್ಕೆ ಎಸ್‌ಡಿಪಿಐ ಬೆಂಬಲ

Update: 2016-09-22 10:41 GMT

ಪುತ್ತೂರು, ಸೆ.22: ನಗರದ ಸಬ್ ರಿಜಿಸ್ಟ್ರೇಷನ್ ಬಳಿಯಲ್ಲಿನ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ದಲಿತ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಎಸ್‌ಡಿಪಿಐ ಬೆಂಬಲ ಸೂಚಿಸಿದೆ. ಈ ಜಾಗವನ್ನು ಸರಕಾರಿ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಕ್ಕೆ ಉಪಯೋಗಿಸಲು ಜಿಲ್ಲಾಧಿಕಾರಿ ನೀಡಿರುವ ಆದೇಶವನ್ನು ಮಾರ್ಪಾಡುಗೊಳಿಸಿ ಅಂಬೇಡ್ಕರ್ ಭವನಕ್ಕೆ ಮಂಜೂರುಗೊಳಿಸಬೇಕು ಎಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಕೆ.ಎ.ಸಿದ್ದೀಕ್ ಸುದ್ದಿಗೋಷ್ಠಿಯಲ್ಲಿಂದು ಒತ್ತಾಯಿಸಿದ್ದಾರೆ. ನಗರದ ಹೃದಯಭಾಗದಲ್ಲಿ ದಲಿತ ಸಮುದಾಯಗಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಇಲ್ಲಿರುವ ಸಬ್ ರಿಜಿಸ್ಟ್ರೇಷನ್ ಕಚೇರಿಯನ್ನು ಮಿನಿವಿಧಾನ ಸೌಧಕ್ಕೆ ಸ್ಥಳಾಂತರಿಸಿ ಈ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಿಸಲು ಮಂಜೂರಗೊಳಿಸಬೇಕು ಎಂಬ ದಲಿತರ ಬೇಡಿಕೆಯು ನ್ಯಾಯೋಚಿತವಾಗಿದ್ದು, ಎಸ್‌ಡಿಪಿಐ ಇದನ್ನು ಬೆಂಬಲಿಸಲಿದೆ ಎಂದುವರು ತಿಳಿಸಿದರು. ಆಸ್ಪತ್ರೆಯ ಅಭಿವೃದ್ಧಿ ಕಾರ್ಯವೂ ಅಗತ್ಯವಾಗಿದ್ದು, ಇದಕ್ಕಾಗಿ ಆಸ್ಪತ್ರೆಯ ಪಕ್ಕದಲ್ಲಿರುವ ಹಳೆ ತಾಲೂಕು ಕಚೇರಿ ಜಾಗ, ಹಳೆ ಸಬ್‌ಜೈಲ್ ಜಾಗ ಮತ್ತು ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಜಾಗವನ್ನು ಉಪಯೋಗಿಸಲು ಅವಕಾಶಗಳಿವೆ. ಈ ಬಗ್ಗೆ ಇಲಾಖೆ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ ಸಿದ್ದೀಕ್, ಈ ಬಗ್ಗೆ ವಿಳಂಬವಾದರೆ ದಲಿತ ಸಂಘಟನೆಗಳು ನಡೆಸುವ ಎಲ್ಲಾ ರೀತಿಯ ಹೋರಾಟಗಳಿಗೆ ಎಸ್‌ಡಿಪಿಐ ಬೆಂಬಲ ನೀಡಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಇಬ್ರಾಹೀಂ ಸಾಗರ್, ತಾಲೂಕು ಘಟಕದ ಕಾರ್ಯದರ್ಶಿ ಹಮೀದ್ ಹಾಜಿ, ಜೊತೆ ಕಾರ್ಯದರ್ಶಿ ಹಂಝ ಅಫ್ನಾನ್ ಮತ್ತು ಕೋಶಾಧಿಕಾರಿ ಪಿ.ಬಿ.ಕೆ.ಮುಹಮ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News