ದಿನೇಶ್ ಅಮೀನ್‌ ಮಟ್ಟು ವಿರುದ್ಧ ಆರೋಪ ಮಾಡಿದ ಪೂಜಾರಿ

Update: 2016-09-22 11:46 GMT

ಮಂಗಳೂರು, ಸೆ.22: ನನ್ನನ್ನು ಟೀಕೆ ಮಾಡಿದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಂತಹವರಿಗೆ ಬಹುಮಾನ ಕೊಡುತ್ತಾರೆ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಮತ್ತೆ ಹಲವರ ವಿರುದ್ಧ ಅಪಸ್ವರ ಎತ್ತಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಇತ್ತೀಚೆಗೆ ದ.ಕ. ಜಿಲ್ಲಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್‌ರವರು ತಮ್ಮ ವಿರುದ್ಧ ಮಾತನಾಡಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

ಅವರಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ಮುಗಿಯುತ್ತಾ ಬಂದಿದೆ. ಈಗ ನನ್ನನ್ನು ಟೀಕಿಸಿದರೆ ತಕ್ಷಣ ಅವರ ಅವಧಿಯನ್ನು ವಿಸ್ತರಿಸುತ್ತಾರೆಂದು ಅವರು ಹಾಗೆ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರನ್ನು ಮುಖ್ಯಮಂತ್ರಿ ದೂರ ಇಟ್ಟಿದ್ದರು. ಆದರೆ ಅವರೀಗ ನನ್ನನ್ನು ಟೀಕಿಸಲು ಆರಂಭಿಸಿದ್ದಾರೆ. ಇದರಿಂದಾಗಿ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಬೆನ್ನ ಹಿಂದೆ ಜಗತ್ತಿಗೆ ಕಾಣುವಂತೆ ಅವರು ಕುಳಿತುಕೊಳ್ಳಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದು ಪೂಜಾರಿಯನ್ನು ಟೀಕಿಸಿದ್ದಕ್ಕೆ ಅವರಿಗೆ ಸಿಕ್ಕ ಬಹುಮಾನ. ಇಲ್ಲದಿದ್ದರೆ ಅಷ್ಟು ಸಮೀಪದಲ್ಲಿ ಕುಳಿತುಕೊಳ್ಳಲು ಆಗುತ್ತಿತ್ತೇ ಎಂದು ಪೂಜಾರಿ ತೀವ್ರ ಅಸಹನೆ ಪ್ರದರ್ಶಿಸಿದರು.

ಸರಕಾರ ದಾರಿ ತಪ್ಪಿದಾಗ ನಾನು ಎಚ್ಚರಿಕೆ ಮಾಡುತ್ತಾ ಬಂದಿದ್ದೇನೆ. ಹಿಂದೆಯೂ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾಗ ಅದನ್ನು ಹೊಗಳಿದ್ದೇನೆ. ತಪ್ಪು ಮಾಡಿದಾಗ ಟೀಕಿಸಿದ್ದೇನೆ. ಅದನ್ನು ನಾನು ಮುಂದೆಯೂ ಮುಂದುವರಿಸುತ್ತೇನೆ ಎಂದು ಹೇಳಿದರು.

ದಿನೇಶ್ ಗುಂಡೂರಾವ್ ಕ್ಷಮೆ ಕೇಳಲಿ

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ, ತಮ್ಮ ಹೇಳಿಕೆಗಾಗಿ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ದಿನೇಶ್ ಗುಂಡೂರಾವ್ ಅವರ ತಂದೆಯ ಪ್ರಾಯ ನನಗಾಗಿದೆ. ಹಾಗಾಗಿ ಅವರು ನನಗೆ ಹಾಗೂ ಅವರ ತಂದೆಗೆ ಇರುವ ನಂಟನ್ನು ಮೊದಲು ತಿಳಿದುಕೊಳ್ಳಲಿ. ನಾನು ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಮಾತನಾಡುತ್ತೇನೆಯೇ ವಿನಹ ಪಕ್ಷ ವಿರೋಧಿಯಾಗಿ ಅಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷನಾದ ಮಾತ್ರಕ್ಕೆ ಜಗತ್ತೇ ತಲೆಮೇಲೆ ಹೊತ್ತುಕೊಂಡಂತೆ ಮಾತನಾಡುತ್ತಾರೆ. ಪಕ್ಷದಿಂದ ನನ್ನನ್ನು ತೆಗೆಯುತ್ತೀರಾ? ನಿಮಗೆ ಅಧಿಕಾರ ಇರುವುದೇ? ಎಂದು ದಿನೇಶ್ ಗುಂಡೂರಾವ್ ವಿರುದ್ಧ ಹರಿಹಾಯ್ದ ಜನಾರ್ದನ ಪೂಜಾರಿ, ಆ ಅಧಿಕಾರ ಇರುವುದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಾತ್ರ ಎಂದರು.

ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಅವರು ಕ್ಷಮೆ ಕೇಳಬೇಕು ಎಂದು ಜನಾರ್ದನ ಪೂಜಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News