ಗರ್ಭಪಾತ ಅನಿವಾರ್ಯವಾದರೆ ಕಾರಣವನ್ನು ನೋಡಬೇಕಿಲ್ಲ: ಬಾಂಬೆ ಹೈಕೋರ್ಟು
ಮುಂಬೈ,ಸೆ.22: ಗರ್ಭಿಣಿ ವೈದ್ಯಕೀಯ ಸಹಾಯದೊಂದಿಗೆ ಗರ್ಭಪಾತ ನಡೆಸುವುದು ಅನಿವಾರ್ಯವಾದರೆ ಅದರ ಕಾರಣವನ್ನು ಕೇಳಬೇಕಾಗಿಲ್ಲ. ಗರ್ಭಪಾತ ನಡೆಸಲು ಮಹಿಳೆಗೆ ಅನುಮತಿ ನೀಡಬೇಕಾಗಿದೆ ಹಾಗೂ ಗರ್ಭಪಾತ ಕುರಿತಿರುವ ನಿಯಮದ ವ್ಯಾಪ್ತಿಯಲ್ಲಿ ಮಹಿಳೆಯ ಮಾನಸಿಕಾರೋಗ್ಯವನ್ನು ಕೂಡಾ ಸೇರಿಸಬೇಕಾಗಿದೆ ಎಂದು ಬಾಂಬೆ ಹೈಕೋರ್ಟು ಸೂಚಿಸಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಪತ್ರಿಕೆಗಳಲ್ಲಿ ಮಹಿಳಾ ಕೈದಿಗಳು ಗರ್ಭಪಾತಕ್ಕೆ ಆಗ್ರಹಿಸಿದರೂ ಜೈಲಧಿಕಾರಿಗಳು ಅವರನ್ನು ಆಸ್ಪತ್ರೆಗೆ ತಲುಪಿಸುತ್ತಿಲ್ಲ ಎಂದು ವರದಿಯಾಗಿತ್ತು, ಇದನ್ನೇ ಅರ್ಜಿಯಾಗಿ ಪರಿಗಣಿಸಿದ ಜಸ್ಟಿಸ್ ವಿ.ಕೆ.ತಹಿಲ್‌ರಮಣಿ, ಮೃದುಲಾ ಭಟ್ಕರ್‌ರಿರುವ ಹೈಕೋರ್ಟು ಪೀಠ ಈ ತೀರ್ಪನ್ನು ನೀಡಿದೆ.
ಕಾನೂನಿನ ಸೌಲಭ್ಯ ವಿವಾಹಿತೆಯರಿಗೆ ಮಾತ್ರವಲ್ಲ ಪುರುಷನೊಂದಿಗೆ ಸಹಜೀವನ ನಡೆಸುತ್ತಿರುವ ಮಹಿಳೆಗೂ ಅನ್ವಯವಾಗುತ್ತದೆ.ಈಗಿನ ಕಾನೂನು ವ್ಯವಸ್ಥೆಯಲ್ಲಿ ಮಹಿಳೆಯ ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆ 12ವಾರಗಳಿಗಿಂತ ಕಡಿಮೆಯಾಗಿದ್ದರೆ ಗರ್ಭಪಾತಕ್ಕೆ ಅನುಮತಿ ನೀಡುತ್ತದೆ. ಗರ್ಭದಿಂದಾಗಿ, ಶಿಶು ಮತ್ತು ತಾಯಿಗೆ ಅಪಾಯ ಸಾಧ್ಯತೆಗಳಿವೆ ಎಂದು ಇಬ್ಬರು ವೈದ್ಯರ ಸಾಕ್ಷ್ಯ ಇದ್ದರೆ 20 ವಾರಗಳವರೆಗೂ ಗರ್ಭಪಾತ ನಡೆಸಲು ಅವಕಾಶ ಇದೆ. ಮಹಿಳೆಯ ಮಾನಸಿಕಾರೋಗ್ಯ ಮತ್ತು ಶರೀರದ ಮೇಲೆ ಅವಳು ಹೊಂದಿರುವ ಗರ್ಭ ಆಳವಾದ ಪ್ರಭಾವವನ್ನು ಬೀರುತ್ತದೆ ಎಂದು ತನ್ನ ತೀರ್ಪಿನಲ್ಲಿ ನ್ಯಾಯಾಲಯ ವಿವರಿಸಿದೆ. ಗರ್ಭಪಾತ ಮಾಡಬೇಕೆ ಬೇಡವೇ ಎಂಬುವುದನ್ನು ಮಹಿಳೆಯೇ ತೀರ್ಮಾನಿಸುವವಳಾಗಿದ್ದಾಳೆ ಮತ್ತು ನಾವು ಮಹಿಳೆಯರ ಮೂಲಭೂತಹಕ್ಕುಗಳ ಕುರಿತು ಅಂಧರಾಗಿರಬಾರದು ಎಂದು ಹೈಕೋರ್ಟಿನ ಪೀಠ ತಿಳಿಸಿದೆ ಎಂದು ವರದಿ ಸೂಚಿಸಿದೆ.