ಮುಖ್ಯಮಂತ್ರಿಯ ಕ್ರಮವನ್ನು ಶ್ಲಾಘಿಸಿದ ಜನಾರ್ದನ ಪೂಜಾರಿ

Update: 2016-09-23 06:32 GMT

ಮಂಗಳೂರು, ಸೆ.22: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪದೇ ಪದೇ ವಿರೋಧ ವ್ಯಕ್ತಪಡಿಸುತ್ತಾ ಗಮನ ಸೆಳೆದಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ತಮಿಳುನಾಡಿಗೆ ಕಾವೇರಿ ನೀರು ಹರಿಸದಿರುವ ಮುಖ್ಯಮಂತ್ರಿಯನ್ನೊಳಗೊಂಡ ರಾಜ್ಯ ಸರಕಾರದ ನಿಲುವನ್ನು ಶ್ಲಾಘಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ದಿಟ್ಟ ಹೆಜ್ಜೆ ಇರಿಸಿದ್ದಾರೆ ಎಂದರು.

ಶನಿವಾರ ಸರ್ವಪಕ್ಷಗಳ ಅಧಿವೇಶನವನ್ನು ಕರೆದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯರ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂಬ ಮಾತನ್ನು ಶ್ಲಾಘಿಸುತ್ತೇನೆ. ಆದರೆ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ಸೈನಾ ಅಪಸ್ವರ ಎತ್ತಿದ್ದಾರೆ. ಕಾವೇರಿ ವಿವಾದಕ್ಕೆ ಸಂಬಂಧಿಸಿ ಕೇಂದ್ರದ ಮಂತ್ರಿಗಳು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಪಾದಿಸಿದರು.

ಸಂವಿಧಾನದ 262ನೇ ಕಲಂ ಪ್ರಕಾರ, ಅಂತಾರಾಜ್ಯ ನದಿ, ಕಣಿವೆ ಹಾಗೂ ಜಲ ಸಂಬಂಧಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಅಧಿಕಾರ ಸಂಸತ್ತಿಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಾವೇರಿ ವಿವಾದಕ್ಕೆ ಸಂಬಂಧಿಸಿ ಸಂಸತಿತಿನಲ್ಲಿ ಸರ್ವಪಕ್ಷಗಳ ಅಭಿಪ್ರಾಯ ಪಡೆದು ಬಹುಮತದ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಧಾನಿ ಸಂವಿಧಾನದತ್ತವಾದ ಈ ಅಧಿಕಾರವನ್ನು ಬಳಸಿಕೊಂಡರೆ ಮೂರು ರಾಜ್ಯಗಳ ನದಿ ನೀರಿನ ವಿವಾದ ಇತ್ಯರ್ಥವಾಗಲು ಸಾಧ್ಯ. ಅದು ಬಿಟ್ಟು ವಿವಾದದ ವಿಚಾರ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಮೂಲಕ ದೇಶದ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ. ಭಾರತ ಸಂವಿಧಾನ ಇಕ್ಕಟ್ಟಿಗೆ ಸಿಲುಕಿದೆ. ಈ ಸಮಯದಲ್ಲಿ ಪ್ರಧಾನಿಯಾಗಿ ಅವರು ತಮ್ಮ ಕರ್ತವ್ಯ ನಿರ್ವಹಿಸಬೇಕಿದೆ ಎಂದರು.

ರಾಜ್ಯದಲ್ಲಿ ಕರೆಯಲಾಗಿರುವ ವಿಶೇಷ ಅಧಿವೇಶನದಲ್ಲಿ ಎಲ್ಲರೂ ಸಾಮೂಹಿಕವಾಗಿ ರಾಜಿನಾಮೆಯನ್ನು ನೀಡಬೇಕು. ಇದರಿಂದ ಸಂವಿಧಾನಿಕ ಬಿಕ್ಕಟ್ಟು ಉಂಟಾಗುತ್ತದೆ. ಆಗ ಪ್ರಧಾನಿಗೆ ಮಧ್ಯಪ್ರವೇಶಿಸುವುದು ಅನಿವಾರ್ಯವಾಗುತ್ತದೆ ಎಂದರು. ಬಿಜೆಪಿ ಈ ಬಗ್ಗೆ ಅಪಸ್ವರ ಎತ್ತುವುದನ್ನು ಬಿಟ್ಟು ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಎತ್ತಿನಹೊಳೆ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಈ ಸಂದರ್ಭ ಆಗ್ರಹಿಸಿದ ಜನಾರ್ದನ ಪೂಜಾರಿ, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಹಸಿರುಪೀಠ ಮರ ಕಡಿದ ಜಾಗದಲ್ಲಿ ಸಸಿಗಳನ್ನು ನಡೆಸುವಂತೆ ಸೂಚಿಸಿದೆ. ಆ ಕೆಲಸವನ್ನು ಸರಕಾರ ಮಾಡಬೇಕು. ಈಗಾಗಲೇ ರಾಜ್ಯದ ನದಿಗಳಲ್ಲಿ ನೀರಿನ ಕೊರತೆ ತಲೆದೋರಿದೆ. ಹಾಗಿರುವಾಗ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸುವುದರಲ್ಲಿ ಅರ್ಥವಿಲ್ಲ ಎಂದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಕರುಣಾಕರ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News